ಕೊನೆಗೂ ಕಾಲುವೆಗಳಿಗೆ ಹರಿದ ಕಾವೇರಿ ನೀರು

ನಿಟ್ಟುಸಿರು ಬಿಟ್ಟ ಮಂಡ್ಯ ರೈತರು
ಮಂಡ್ಯ: ಜು.17- ಕಾಲುವೆಗಳಿಗೆ ಕೊನೆಗೂ ಕಾವೇರಿ ನೀರು ಹರಿದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯಿಂದ ಮಂಗಳವಾರ ರಾತ್ರಿಯಿಂದ ಸಕ್ಕರೆ ನಾಡಿನ ಕಾಲುವೆಗಳಿಗೆ ನೀರು ಹರಿಸಲಾಗ್ತಿದೆ.
ಕೆಆರ್‌ಎಸ್‌ ಅಣೆಕಟ್ಟೆಯಿಂದ ರೈತರ ಬೆಳೆಗಳೆಗೆ ನೀರು ಬಿಡಲಾಗಿದ್ದು, ಅಂತೂ ಕಾಲುವೆಗಳಿಗೆ ನೀರು ಬಂತು ತಮ್ಮ ಬೆಳೆ ಉಳಿಸಿಕೊಳ್ಳಬಹುದು ಎಂದು ರೈತರು ಖುಷಿಯಾಗಿದ್ದಾರೆ. ಜಿಲ್ಲೆಯಲ್ಲಿ ನೀರಿಲ್ಲದೆ ಒಣಗುತ್ತಿರುವ ಬೆಳೆ ರಕ್ಷಣೆಗಾಗಿ ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ಕಳೆದೊಂದು ತಿಂಗಳಿನಿಂದ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಜುಲೈ 15 ರಂದು ಬೆಂಗಳೂರಿನಲ್ಲಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬೆಳೆಗಳ ರಕ್ಷಣೆ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲು ಹತ್ತು ದಿನಗಳ ಕಾಲ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಮಾಡಲಾಗಿತ್ತು.
ನೀರಾವರಿ ಸಲಹಾ ಸಮಿತಿ ನಿರ್ಧರಿಸಿದಂತೆ ತಡರಾತ್ರಿಯಿಂದ ಮೊದಲ ಹಂತವಾಗಿ ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡಲಾಗಿದ್ದು, ಹಂತ ಹಂತವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುವುದು ಎನ್ನಲಾಗುತ್ತಿದೆ.
ಸದ್ಯ ನೀರಿಲ್ಲದೆ ಶ್ರಮಪಟ್ಟು ಮಾಡಿದ ಕೃಷಿ ಒಳಗಿ ನಾಶವಾಗುವ ಸ್ಥಿತಿಯನ್ನು ನೋಡಿ ಕಂಗಲಾಗಿದ್ದ ರೈತನ ಮೊಗದಲ್ಲಿ ನಾಲೆಗಳಿಗೆ ಹರಿದು ಬಂದ ಕಾವೇರಿ ನೀರು ನಗು ಮೂಡಿಸಿದೆ. ಇಷ್ಟು ದಿನ ನೀರಿಗಾಗಿ ಒದ್ದಾಡಿ, ಪ್ರತಿಭಟನೆ ಮಾಡಿದಕ್ಕೂ ಸಾರ್ಥಕತೆ ದೊರಕಿದೆ.
ರೈತರು ಕೆಆರ್​ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ಹೊಸ ಬೆಳೆಗಳನ್ನು ಬೆಳೆಯದಂತೆ ಹಾಗೂ ಹೊಸ ಬೆಳೆಗಳಿಗೆ ಪೂರ್ವಸಿದ್ಧತೆ ಮಾಡಿಕೊಳ್ಳಬಾರದು. ಯಾವುದೇ ಹೊಸ ಬೆಳೆಗಳನ್ನು ಬೆಳೆದು ಹಾನಿಯಾದರೆ ಅದಕ್ಕೆ ನೀರಾವರಿ ಇಲಾಖೆ ಹೊಣೆಯಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Leave a Comment