ಕೊಡಗು; ಸಮರೋಪಾದಿಯಲ್ಲಿ ಪರಿಹಾರ ಕಾರ್ಯ

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೇಳಿಕೆ

ಮೈಸೂರು, ಆ. 23- ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಈವರೆಗೆ 7 ಸಾವಿರ ಜನರನ್ನು ಈವರೆಗೆ ರಕ್ಷಣೆ ಮಾಡಲಾಗಿದ್ದು, 10 ಜನರ ಮೃತಪಟ್ಟು, ಮೂವರು ಕಾಣೆಯಾಗಿದ್ದಾರೆ ಎಂದು ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕೊಡಗು ನೆರೆ ಸಂತ್ರಸ್ತರಿಗೆ ನೀಡಲಾದ ದೇಣಿಗೆ ಮೊತ್ತದ ಚೆಕ್ ಸ್ವೀಕರಿಸಿ ಮಾತನಾಡಿದ ಅವರು, ಇಂದಿನಿಂದ ನೆರೆ ಕಡಿಮೆಯಾಗಿರುವ ಸ್ಥಳಗಳಲ್ಲಿ 40 ಶಾಲೆಗಳನ್ನು ಆರಂಭಿಸಲಾಗಿದೆ. ಶಾಲೆಗೆ ಹೋಗಲಾಗದ ಮಕ್ಕಳಿಗೆ ಪರಿಹಾರ ಕೇಂದ್ರದಲ್ಲಿಯೇ ಪಾಠ ಪ್ರವಚನ ಮುಂದುವರಿಸಲಾಗಿದೆ ಎಂದರು.

ನೆರೆಪೀಡಿತ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಶೌಚಾಲಯ ಸೇರಿದಂತೆ ಗಲೀಜಾಗಿರುವ ಸ್ಥಳಗಳನ್ನು ಶುದ್ಧೀಕರಣ ಮಾಡಲಾಗುತ್ತಿದೆ. ಮೈಸೂರಿನ ಮಠ ಮಾನ್ಯಗಳೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ಈವರೆಗೆ 25 ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಗಿದೆ ಎಂದು ವಿವರಿಸಿದರು.

ಸೀರೆ ವಿತರಣೆ ಇಲ್ಲ

ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ವಿತರಿಸುವುದಾಗಿ ಈ ಮುಂಚೆ ಘೋಷಣೆ ಮಾಡಿದ್ದೆವು. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾರಣಕ್ಕೆ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದೆ. ಹಾಗಾಗಿ ಸದ್ಯ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಯನ್ನು ವಿತರಿಸಲಾಗುತ್ತಿಲ್ಲ ಎಂದು ಸಚಿವ ಸಾ.ರಾ. ಮಹೇಶ್ ಸ್ಪಷ್ಟಪಡಿಸಿದರು.

Leave a Comment