ಕೊಡಗು: ನೆಲ ಕಚ್ಚಿದ ರಿಯಲ್ ಎಸ್ಟೇಟ್ ಉದ್ಯಮ

ಮಡಿಕೇರಿ, ಸೆ. 11. ಕೊಡಗಿನಲ್ಲಿ ಭೂಮಿ ಖರೀದಿಸಿದರೆ ಅವರು ಸಿರಿವಂತರೆಂಬ ಕಾಲವೊಂದಿತ್ತು. ಇದು ಪ್ರೆತಿಷ್ಠೆಯ ವಿಷಯವೂ ಆಗಿತ್ತು. ಹೀಗೆ ಭೂಮಿ ಖರೀದಿ ಮಾಡಿದವರು ಸಮಾಜದಲ್ಲಿ ವಿಶೇಷ ಸ್ಥಾನಮಾನಗಳಿಗೆ ಭಾಜನರಾಗುತ್ತಿದ್ದರು. ಆದರೆ, ಕೊಡಗಿನಲ್ಲಿ ನೆರೆ ಸನ್ನಿವೇಶದಿಂದ ಈ ಸನ್ನಿವೇಶ ಬುಡಮೇಲಾಗಿದೆ.
ಪ್ರವಾಸೋದ್ಯಮ ಪರಿಣಾಮವಾಗಿ ಬೆಂಗಳೂರನ್ನೂ ಮೀರಿಸಿದ್ದ ಕೊಡಗಿನ ಭೂಮಿಯ ಬೆಲೆ ನೆರೆ ದುರಂತದ ಬಳಿಕ ಗಗನದಿಂದ ಪಾತಾಳಕ್ಕೆ ಕುಸಿದಿದೆ. ಭೂಮಿ ಕೊಳ್ಳುವ ಉದ್ದೇಶದಿಂದ ಭೂ ಮಾಲೀಕರಿಗೆ ಕೊಟ್ಟ ಮುಂಗಡ ಹಣವನ್ನು ಹಿಂದಕ್ಕೆ ನೀಡಿ ಎಂದು ಗೋಗರೆಯುವ ಸ್ಥಿತಿಯಲ್ಲಿ ಭೂಮಿ ಕೊಳ್ಳುವವರಿದ್ದಾರೆ. ಹೀಗಾಗಿ ಕೊಡಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಅಕ್ಷರಶಃ ಮಣ್ಣುಪಾಲಾಗಿದೆ.
ಕೊಡಗು ಭೂಮಿ ಖರೀದಿದಾರರ ಪಾಲಿಗೆ ಹಾಟ್‍ಸ್ಪಾಟ್ ಆಗಿತ್ತು. ಕೊಡಗಿನಲ್ಲಿ ಭೂಮಿಯನ್ನು ಖರೀದಿಸುವುದು, ಮಂಗಳ ಗ್ರಹದಲ್ಲಿ ನೆಲವನ್ನು ಕಾಯ್ದಿರಿಸುವುದು ಒಂದೇ ಎಂಬ ಭಾವನೆ ಇತ್ತು. ಏಕೆಂದರೆ, ಪ್ರವಾಸೋದ್ಯಮ ಬೆಳೆಯುತ್ತಿರುವ ವೇಗಕ್ಕೆ ಕೊಡಗಿನಲ್ಲಿ ನೆಲವನ್ನು ಖರೀದಿಸಲು ದೇಶದ ವಿವಿಧ ಭಾಗಗಳಿಂದ ಜನರು ಮುಗಿ ಬೀಳುತ್ತಿದ್ದರು. ಬೆಟ್ಟ, ಗುಡ್ಡ, ಜಮೀನು, ಕಾಫಿ ತೋಟ, ಬಾಣೆ, ಕಾಡು ಎಂಬ ಭೇದವೇ ಇಲ್ಲದೆ ಕಂಡ ಕಡೆಯೆಲ್ಲ ಖರೀದಿಗೆ ಜನರು ಹಪಾಹಪಿಸುತ್ತಿದ್ದರು. ಕೊಡಗಿನಲ್ಲಿ ಭೂಮಿ ಖರೀದಿಯಷ್ಟು ಲಾಭದಾಯಕ ವ್ಯವಹಾರ ಬೇರೆ ಇಲ್ಲ ಎಂಬ ಭಾವನೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹರಿದಾಡಿದ ಪರಿಣಾಮವಾಗಿ ಕೊಡಗು ಖರೀದಿದಾರರ ಸ್ವರ್ಗ ಎಂಬಂತಾಗಿತ್ತು. ಕೊಡಗಿನ ನೆಲವನ್ನು ಮಾರಾಟ ಮಾಡಲು ದೇಶದ ಬಹುತೇಕ ಎಲ್ಲಾ ರಿಯಲ್ ಎಸ್ಟೇಟ್ ಮಂದಿ ತಮ್ಮ ವೆಬ್‍ಸೈಟ್‍ಗಳಲ್ಲಿ ಆಮಿಷ ತೋರಿಸುತ್ತಿದ್ದರು.
ಪ್ರವಾಸೋದ್ಯಮದ ಆಕರ್ಷಣೆ
ಕೊಡಗಿನಲ್ಲಿ ಭೂಮಿಯನ್ನು ಕೊಳ್ಳುವವರು ಸುಮಾರು 10 ವರ್ಷಗಳ ಹಿಂದೆ ಹೆಚ್ಚಿಗೆ ಇರಲಿಲ್ಲ. ಆದರೆ, ಪ್ರವಾಸೋದ್ಯಮ ನಿರೀಕ್ಷೆಗೆ ಮೀರಿ ಬೆಳೆದ ಹಿನ್ನೆಲೆಯಲ್ಲಿ ಇಲ್ಲಿನ ನೆಲಕ್ಕೆ ಚಿನ್ನವನ್ನು ಮೀರಿಸುವ ಬೆಲೆ ಬಂದಿದೆ. ಪ್ರತಿ ವರ್ಷ ಕೊಡಗಿಗೆ ಸುಮಾರು 25ರಿಂದ 30 ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಬಹುತೇಕ ಮಂದಿ ಪ್ರವಾಸದ ವೇಳೆ ಜಿಲ್ಲೆಯಲ್ಲಿಯೇ ತಂಗುವ ಹಿನ್ನೆಲೆಯಲ್ಲಿ ಇಲ್ಲಿನ ಹೋಂಸ್ಟೇ, ರೆಸಾರ್ಟ್, ಹೋಟೆಲ್‍ಗಳಿಗೆ ಭಾರೀ ಬೇಡಿಕೆ ಬಂದಿದೆ. ಅಲ್ಲದೆ, ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನಾ ವ್ಯವಹಾರ ಆರಂಭವಾಗಿದೆ. ಇದರಿಂದಾಗಿ ಕೊಡಗಿನಲ್ಲಿ ಭೂಮಿಯನ್ನು ಖರೀದಿಸಿ ಅದರಿಂದ ಲಾಭ ಪಡೆದುಕೊಳ್ಳಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದರು.
ಕೇಳುವವರೇ ಇಲ್ಲ:
ಮಹಾಮಳೆ ಹಾಗೂ ಭೂ ಕುಸಿತದಿಂದಾಗಿ ಕೊಡಗು ಹಿಂದೆಂದೂ ಕಾಣದ ಸ್ಥಿತಿಗೆ ತಲುಪಿದೆ. ಪ್ರವಾಸೋದ್ಯಮ ತತ್ತರಿಸಿದೆ. ಬೆಟ್ಟ ಹಾಗೂ ಅದರೊಂದಿಗೆ ಕಟ್ಟಡಗಳು ಜಾರುಬಂಡಿಯಂತೆ ಪ್ರಪಾತಕ್ಕೆ ಜಾರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ, ಅಂತರ್‍ಜಾಲದಲ್ಲಿ ನೋಡಿದ ಮಂದಿ ಕಂಗಾಲಾಗಿದ್ದಾರೆ. ಕೊಡಗಿನಲ್ಲಿ ಭೂಮಿ ಖರೀದಿಸಿದ ಹಲವರಿಗೆ ಸಾಕಷ್ಟು ನಷ್ಟವಾಗಿದೆ. ಇನ್ನು ಮುಂದೆ ಕೊಡಗು ಸೇಫ್ ಅಲ್ಲ ಎನ್ನುವ ಕಾರಣಕ್ಕೆ ಖರೀದಿದಾರರು ಹಿಂದೆ ಸರಿದಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಮುಂಗಡ ಹಣವನ್ನು ನೀಡಿದ್ದು, ಕರಾರು ರದ್ದುಪಡಿಸುವಂತೆ ಗೋಗೆರೆಯುವ ಸ್ಥಿತಿಗೆ ಬಂದಿದ್ದಾರೆ. ಯಾರೂ ಕೂಡ ಜಾಗವನ್ನು ಖರೀದಿಸಲು ಮುಂದೆ ಬಾರದ ಸ್ಥಿತಿ ನೆಲೆಸಿದೆ.

Leave a Comment