ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ಸಿಎಂ ಭರವಸೆ

ಮಡಿಕೇರಿ, ಅ. ೧೭- ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ತತ್ತರಿಸಿ ಹೋಗಿರುವುದು ನನ್ನ ಗಮನಕ್ಕೆ ಬಂದಿದೆ. ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಎಲ್ಲ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಇಂದು ಸಂಜೆ ತಲಕಾವೇರಿಯಲ್ಲಿ ನೆರವೇರಲಿರುವ ಪ್ರಸಿದ್ಧ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ನಗರದ ನಗರದ ಗಾಂಧಿ ಮೈದಾನದಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೀಡಾಗಿರುವವರೊಂದಿಗೆ ಏರ್ಪಡಿಸಿರುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಇಲ್ಲಿಗೆ ಸುಮ್ಮನೇ ಮಾತನಾಡಿ ಹೋಗಲು ಬಂದಿಲ್ಲ. ಇಲ್ಲಿನ ಸಮಸ್ಯೆಗಳನ್ನು ನಾನು ಕೇಳುತ್ತಿದ್ದೇನೆ. ಮಾಧ್ಯಮಗಲ್ಲಿ ನೋಡಿ ಅರಿತಿದ್ದೇನೆ. ನಿಮ್ಮ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಸಿಎಂ ಕೊಡಗಿನ ಸಂಕಷ್ಟಪೀಡಿತ ಜನರಿಗೆ ಭರಸವೆ ನೀಡಿದರು.
ಇತಿಹಾಸ ಕಂಡರಿಯದ ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ನೆಲ ಕಚ್ಚಿದೆ. ಪ್ರವಾಸೋದ್ಯಮವನ್ನೇ ನಂಬಿರುವ ಅನೇಕರು ಬಹಳಷ್ಟು ನಷ್ಟಕ್ಕೆ ಸಿಲುಕಿದ್ದಾರೆ. ಸಾಕಷ್ಟ ಆಸ್ತಿ ಪಾಸ್ತಿಗೆ ನಷ್ಟವಾಗಿದೆ. ಮನೆ ಮಠ ಕಳೆದುಕೊಂಡ ಕುಟುಂಬಗಳು ಜೀವನ ನಡೆಸಲು ಕಷ್ಟವಾಗಿದೆ. ಶಾಲಾ ಮಕ್ಕಳಿಗೆ ಇನ್ನಿಲ್ಲದ ಸಮಸ್ಯೆಗಳು ಎದುರಾಗಿವೆ. ಈ ಎಲ್ಲ ಸಮಸ್ಯೆಗಳಿಗೆ ಸರ್ಕಾರದ ವತಿಯಿಂದ ಶಾಶ್ವತ ಪರಿಹಾಕರ ನೀಡಲಾಗುವುದು. ನೀವು ಧೃತಿಗೆಡದಿರಿ ಎಂದು ನಿರಾಶ್ರಿತ ನೊಂದ ಮನಸ್ಸುಗಳಿಗೆ ಸಾಂತ್ವನದ ನುಡಿಗಳ ಮೂಲಕ ಧೈರ್ಯ ತುಂಬಿದರು.
ಇದಕ್ಕೂ ಮೊದಲು ಸಿಎಂ ಎಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈವರೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು.

Leave a Comment