ಕೊಡಗು ಕಟ್ಟುವ ಹೊಣೆ ನಮ್ಮದು: ನಿರ್ಮಲಾನಂದ ಶ್ರೀ

ಬೆಂಗಳೂರು, ಸೆ. ೨- ದೇಶಕ್ಕೆ ಎಲ್ಲವನ್ನು ಕೊಟ್ಟ ನಮ್ಮ ಕೊಡಗು ಇಂದು ಎಲ್ಲವನ್ನೂ ಕಳೆದುಕೊಂಡಿದೆ. ಅಂತಹ ಕೊಡಗನ್ನು ಮತ್ತೆ ಕಟ್ಟುವಂತಹ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಪರಿಸ್ಥಿತಿಯಲ್ಲಿ ನಾಡಿನ ಪ್ರತಿಯೊಬ್ಬ ನಾಗರೀಕ ಕೈಲಾದಷ್ಟು ನೆರವು ನೀಡುವ ಮೂಲಕ ಹೃದಯವಂತಿಕೆ ಮೆರೆಯಬೇಕಿದೆ ಎಂದು ಶ್ರೀ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಆದಿಚುಂಚನಗಿರಿ ಶ್ರೀಮಠದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ `ಕೊಡಗಿಗಾಗಿ ನಮ್ಮ ಕೊಡುಗೆ’ ಎಂಬ ದೇಣಿಗೆ ಸಂಗ್ರಹ ಕಾಲ್ನಡಿಗೆ ಜಾಥಾ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಕೊಡಗಿನಲ್ಲಿ ಪ್ರಕೃತಿ ಪ್ರಳಯದಿಂದಾಗಿ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗಿನ ಬಂಧುಗಳಿಗೆ ಕರ್ನಾಟಕದ ಪ್ರತಿಯೊಬ್ಬ ನಾಗರಿಕ ನೆರವು ನೀಡುವುದು ಜವಾಬ್ದಾರಿಯ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟ ಶ್ರೀಗಳು ಕೊಡಗು ನಮ್ಮ ನಾಡಿನ ಒಂದು ಅಂಗ. ನಮ್ಮ ದೇಹದ ಒಂದು ಅಂಗವನ್ನು ಕಳೆದುಕೊಂಡರೆ ಯಾವ ರೀತಿಯಲ್ಲಿ ಬಾದಿಸುತ್ತೇವೆಯೋ ಅಂತಹ ಸ್ಥಿತಿಯಲ್ಲಿ ಕರ್ನಾಟಕ ಇದೆ. ಇಂತಹ ಪರಿಸ್ಥಿತಿಯ್ಲಲಿ ನಾಡಿನ ಜನತೆ ಹೃದಯವಂತಿಕೆಯಿಂದ ಕೊಡಗಿನ ಜನತೆಗೆ ನೆರವಿನ ಹಸ್ತ ನೀಡಬೇಕಿದೆ ಎಂದು ನಿರ್ಮಲಾನಂದ ಸ್ವಾಮೀಜಿ ಕರೆ ನೀಡಿದರು.
ಆದಿಚುಂಚನಗಿರಿ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ಈ ನಿಧಿ ಸಂಗ್ರಹ ಪಾದಯಾತ್ರೆ ಸಾಂಕೇತಿಕವಾಗಿದ್ದು, ಈ ಒಂದು ಕಾರ್ಯಕ್ರಮದಲ್ಲಿ ಸರ್ವಧರ್ಮಗಳ ಗುರುಗಳು, ಜಾತ್ಯತೀತ ಮಠಾಧೀಶರು, ಕ್ರೈಸ್ತ ಪಾದ್ರಿಗಳು, ಬೌದ್ಧ ಭಿಕ್ಷುಗಳು, ಮುಸ್ಮಿಂ ಮುಲ್ಲಾಗಳು ಸೇರಿದಂತೆ ಸಮಾಜದ ಎಲ್ಲಾ ಬಗೆಯ ಜನರು ಭಾಗವಹಿಸಿದ್ದಾರೆ. ಇದರಲ್ಲಿ ಯಾವುದೇ ಧರ್ಮ, ಜಾತಿ, ಜಿಲ್ಲೆ ಎಂಬುದು ಬರುವುದಿಲ್ಲ. ಸಂಕಷ್ಟದಲ್ಲಿರುವ ಕೊಡಗಿನ ಜನತೆಯ ಕೈ ಹಿಡಿಯುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶ್ರೀಗಳು ಮನವಿ ಮಾಡಿದರು.
ಕೊಡಗು ಪ್ರಾಂತ್ಯ ದೇಶಕ್ಕೆ ನೂರಾರು ಸೇನಾನಿಗಳನ್ನು ನೀಡಿದರೆ. ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಕಾವೇರಿ ನೀರು ನೀಡುವ ಮೂಲಕ ಜನರನ್ನು ಜೀವಂತವಾಗಿಟ್ಟಿದೆ. ಸಮೃದ್ಧ ಪ್ರಕೃತಿ ವೈಭವದಿಂದ ಕಣ್ಮನ ತಣಿಸುತಿದ್ದ ಕೊಡಗು ಇಂದು ಎಲ್ಲವನ್ನು ಕಳೆದುಕೊಂಡು ನಿಂತಿದೆ. ಅಂತಹ ಪ್ರಕೃತಿದತ್ತ ಕೊಡಗು ರಾಜ್ಯವನ್ನು ಪುನಶ್ಚೇತನಗೊಳಿಸಬೇಕಿದೆ. ಈ ಕಾರ್ಯ ಕೇವಲ ಸರ್ಕಾರದಿಂದ ಮಾತ್ರ ಸಾಧವಾಗುವುದಿಲ್ಲ. ಪ್ರತಿಯೊಬ್ಬರ ಸಹಾಯ, ನೆರವು, ಮಾರ್ಗದರ್ಶನ ಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯದ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾಂಕೇತಿಕವಾಗಿ ಇಂದಿನ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 20 ಲಕ್ಷ ರೂಗಳನ್ನು ದೇಣಿಗೆ ನೀಡಿ ಮಾತನಾಡಿದ ಶಾಸಕ, ಮಾಜಿ ಸಚಿವ ವಿ. ಸೋಮಣ್ಣ, ಸದ್ಯಕ್ಕೆ 20 ಲಕ್ಷ ರೂಗಳನ್ನು ಕೊಡಗಿನ ಪರಿಹಾರಕ್ಕೆ ನೀಡಿದ್ದೇನೆ. ಮುಂದೆ ಅಗತ್ಯವಿದ್ದಲ್ಲಿ ಶ್ರೀಗಳು ನಿರ್ದೇಶನ ನೀಡಿದಲ್ಲಿ, ಇನ್ನೂ ಹೆಚ್ಚಿನ ಸಹಾಯ ನೀಡುವುದಾಗಿ ತಿಳಿಸಿದರು.
ಇದೇ ವೇಳೆ ಮತ್ತೊಬ್ಬ ಶಾಸಕ ಎಂ. ಕೃಷ್ಣಪ್ಪ 25 ಲಕ್ಷ ರೂಗಳನ್ನು ಆದಿಚುಂಚನಗಿರಿ ಮಠ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾದ ಮೂಲಕ ಕೊಡಗಿನ ಜನರಿಗೆ ನೆರವು ನೀಡುತ್ತಿದ್ದೇನೆ. ಆ ಭಾಗದ ಜನರ ಮುಂದಿನ ಬದುಕು ಸುಖಮಯವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಮಾಜಿ ಉಪ ಮೇಯರ್ ಎನ್. ಶ್ರೀನಿವಾಸ 5 ಲಕ್ಷ ರೂಗಳನ್ನು ದೇಣಿಗೆ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಆರ್. ಅಶೋಕ, ಸ್ಥಳೀಯ ಬಿಬಿಎಂಪಿ ಸದಸ್ಯ ವಾಗೀಶ್ ಸೇರಿದಂತೆ ಅನೇಕ ರಾಜಕೀಯ ಧುರೀಣರು, ಸಹಸ್ರಾರು ನಾಗರಿಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Leave a Comment