ಕೊಡಗರು ಸ್ವಾತಂತ್ರ್ಯ ಪೂರ್ವದಿಂದಲೂ ದೇಶ ಕಾಯುವ ಸೈನಿಕರು

ಕೆ.ಆರ್.ಪೇಟೆ, ಆ.23- ಮಂಡ್ಯ ಜಿಲ್ಲೆಯನ್ನು ಸದಾ ಹಸಿರಾಗಿರುವಂತೆ ನೋಡಿಕೊಂಡಿರುವ ಕೊಡಗಿನ ನಮ್ಮ ಕಾವೇರಿ ಉಗಮ ಸ್ಥಾನದ ನಿವಾಸಿಗಳು ಪ್ರವಾಹದಿಂದ ಸಂತ್ರಸ್ಥರಾಗಿದ್ದು ಅವರಿಗೆ ನಾವು ಕೈಲಾದ ಸಹಾಯ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವವಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಎಂ.ಪಿ.ಲೋಕೇಶ್ ಹೇಳಿದರು.
ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸಂತೆಯಲ್ಲಿ ಕೊಡಗು ಸಂತ್ರಸ್ಥರ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಡಗಿನ ಜನ ಸ್ವಾಭಿಮಾನಿಗಳು, ಸ್ವಾತಂತ್ರ್ಯ ಪೂರ್ವದಿಂದಲೂ ದೇಶ ಕಾಯುವ ಸೈನಿಕರಾಗಿ ಕೆಲಸ ಮಾಡಿದ ಧೀಮಂತ ವ್ಯಕ್ತಿಗಳು ಅವರು ಇಂದು ಭಾರಿ ಮಳೆಯಾಗಿರುವ ಕಾರಣ ಮನೆ ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಇಂತಹ ಸಂದರ್ಭದಲ್ಲಿ ನಮ್ಮ ಜೀವ ನದಿ ಕಾವೇರಿಯ ತವರೂರು ಕೊಡಗಿನ ಜನತೆಯ ಕಷ್ಟದಲ್ಲಿ ಭಾಗಿಯಾಗಲೇಬೇಕಾಗಿದೆ. ಇದಕ್ಕಾಗಿ ನಮ್ಮ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ತರಕಾರಿ ವರ್ತಕರ ಸಂಘದ ಪದಾಧಿಕಾರಿಗಳು ಪಾದಯಾತ್ರೆ ಮೂಲಕ ಸುಮಾರು 50ಸಾವಿರ ದೇಣಿಗೆ ಸಂಗ್ರಹಿಸಿರುವುದು ಒಳ್ಳೆಯ ಕೆಲಸವಾಗಿದೆ. ಇದನ್ನು ಇಂದು ಎಪಿಎಂಸಿ ಖಜಾನೆಯಲ್ಲಿ ಇಟ್ಟು ನಾಳೆ ಬೆಳಿಗ್ಗೆ ತಹಸೀಲ್ದಾರ್ ಅವರ ಮೂಲಕ ಕೊಡಗಿನ ಸಂತ್ರಸ್ಥರ ನಿಧಿಗೆ ಕಳುಹಿಸಿಕೊಡಲು ಕ್ರಮ ವಹಿಸಲಾಗುವುದು. ಪ್ರತಿದಿನ ಸಾವಿರಾರು ಪ್ರವಾಸಿಗರಿಗೆ ಆಶ್ರಯ ನೀಡುತ್ತಿದ್ದ ಕೊಡಗು ಜಿಲ್ಲೆಯು ಇಂದು ಪ್ರವಾಹದಿಂದ ಹಾಗೂ ಭೂ ಕುಸಿತದಿಂದ ತತ್ತರಿಸಿದ್ದು, ತನ್ನ ಮೂಲ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಅಲ್ಲಿನ ಮನೆಗಳು ಸಂಪೂರ್ಣ ನಾಶವಾಗಿವೆ. ಜನರು ನಿರಾಶ್ರಿತರಾಗಿ ಸರ್ಕಾರವು ತೆರೆದಿರುವ ಗಂಜಿಕೇಂದ್ರದಲ್ಲಿ ಆಶ್ರಯ ಪಡೆದುಕೊಂಡು ದಯನೀಯ ಸ್ಥಿತಿಯಲ್ಲಿ ಬದುಕುವಂತಾಗಿದೆ. ಅವರ ಮನೆಗಳು, ಜಾನುವಾರುಗಳು, ಹಣ ಆಭರಣಗಳು ನೀರಿನಲ್ಲಿ ಕೊಚ್ಚಿ ಹೋಗಿ ಸಂಪೂರ್ಣ ನಷ್ಟ ಹೊಂದಿದ್ದಾರೆ. ಬೀದಿಗೆ ಬಿದ್ದಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯದ ಎಲ್ಲ ಜನತೆ ಕೊಡಗಿನ ಜನತೆಯೆ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಅವರ ಪುನರ್ ವಸತಿಗೆ ಕೈಲಾದಷ್ಟು ಹಣವನ್ನು ದೇಣಿಗೆ ನೀಡಬೇಕು. ಪ್ರತಿದಿನ ಅವರಿಗೆ ಬಳಸಲು ಅಗತ್ಯವಿರುವ ವಿವಿಧ ಬಗೆಯ ವಸ್ತುಗಳನ್ನು ನೀಡುವ ಮೂಲಕ ಎಲ್ಲವನ್ನು ಕಳೆದುಕೊಂಡು ಜೀವವನ್ನು ಉಳಿಸಿಕೊಂಡಿರುವ ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಲ್ಲದಕ್ಕೂ ಸರಕಾರವನ್ನೇ ಕಾದು ಕುಳಿತರೆ ಇನ್ನೂ ನಾಲ್ಕಾರು ವರ್ಷಗಳು ಕಳೆದರೂ ಸಂತ್ರಸ್ಥರು ಅವರು ಸಂಕಷ್ಟದ ಜೀವನ ಸಾಗಿಸಬೇಕಾಗುತ್ತದೆ ಎಂದು ಎಂ.ಪಿ.ಲೋಕೇಶ್ ತಿಳಿಸಿದರು.
ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಹಾಗೂ ತರಕಾರಿ ವರ್ತಕರ ಸಂಘದ ಅಕ್ಕಿಹೆಬ್ಬಾಳು ನಾಗಣ್ಣ, ಆರ್.ನಟರಾಜ್, ಯೂಸೂಫ್, ಸದಾನಂದ್, ಶ್ರೀಧರ್, ಎ.ವಿ.ಮಹೇಶ್, ನರಸೇಗೌಡ, ಎಪಿಎಂಸಿ ನಿರ್ದೇಶಕರಾದ ಶಶಿಧರ್ ಸಂಗಾಪುರ, ಚಂದ್ರಹಾಸ, ಐನೋರಹಳ್ಳಿ ಮಲ್ಲೇಶ್, ನಾಗರಾಜೇಗೌಡ, ಅಶೋಕ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೊದಿಕೆ ದೇಣಿಗೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಸ್.ಕೃಷ್ಣಮೂರ್ತಿ ಅವರು ಕೊಡಗು ಸಂತ್ರಸ್ಥರಿಗಾಗಿ ಹೊದಿಕೆಗಳು ಹಾಗೂ ಕೊಡೆಗಳನ್ನು ಸೇವಾ ಭಾರತೀ ಸ್ವಯಂ ಸೇವಕರಿಗೆ ದೇಣಿಗೆಯಾಗಿ ನೀಡಿದರು. ಈ ಸಂಧರ್ಭದಲ್ಲಿ ಸೇವಾ ಭಾರತಿಯ ಸ್ವಯಂ ಸೇವಕರಾದ ಮಣಿಕಂಠ, ಯೋಗೇಶ್, ಕುಚೇಲ, ವಿಕಾಸ್‍ಗೌಡ ಇತರರು ಹಾಜರಿದ್ದರು.

Leave a Comment