ಕೊಟ್ಟ ಮಾತಿಗೆ ಬಿಎಸ್‌ವೈ ಬದ್ಧ ಶ್ರೀರಾಮುಲು

ಬಳ್ಳಾರಿ, ಜ. ೨೫- ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ರಾಜೀನಾಮೆ ನೀಡಿದ ೧೭ ಮಂದಿ ಶಾಸಕರಿಂದಾಗಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸೋತವರಿಗೆ ಸಚಿವರನ್ನಾಗಿ ಮಾಡುವ ಬೇಡಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.
ಶ್ರೀರಾಮುಲು ಉಪಮುಖ್ಯಮಂತ್ರಿ ಆಗಬೇಕು ಎನ್ನುವ ಜನರ ಬೇಡಿಕೆಯನ್ನು ನಾನು ಅಲ್ಲಗಳೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವೀಲ್ ಚೇರ್ ನೀಡದ ಅಮಾನವೀಯ ಘಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತನಿಖೆ ನಡೆಸಲು ಆದೇಶ ಮಾಡಲಾಗಿದೆ. ಇಂತಹ ಘಟನೆಗಳನ್ನು ಬಿಹಾರ ಉತ್ತರಪ್ರದೇಶ ರಾಜ್ಯಗಳಲ್ಲಿ ನಡೆದಿದ್ದವು. ಈಗ ಬಳ್ಳಾರಿ ಯಲ್ಲಿ ನಡೆದಿದೆ. ತಪ್ಪಿತಸ್ಥರು ಯಾರೇ ಇದ್ದರೂ ತನಿಖೆ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆಂದರು.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ. ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದಾಗ ನನ್ನ ಗಮನಕ್ಕೆ ಬಂದಿದೆ. ಬೆಡ್ ಕೊರತೆ ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದೆಂದು ತಿಳಿಸಿದರು.
ರಾಜ್ಯದಲ್ಲಿ ಆರ್ಥಿಕ ಸಮಸ್ಯೆ ಇಲ್ಲ. ನೆರೆ ಹಾವಳಿ ಸಮರ್ಥವಾಗಿ ಎದುರಿಸಿದ್ದೇವೆ. ಕೇಂದ್ರ ರಾಜ್ಯ ಸರ್ಕಾರ ಸಾಕಷ್ಟು ಅನುಕೂಲ ಮಾಡಿದೆ. ಶಾಸಕರ ಮೂರು ತಿಂಗಳ ಸಂಬಳ ಆಗಿಲ್ಲ ಎನ್ನುವುದು ವಿರೋಧ ಪಕ್ಷದವರ ಆರೋಪ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ವೇತನ ನೋಡಿಲ್ಲ. ಪರಿಶೀಲನೆ ಮಾಡ್ತೇನೆ ಎಂದರು.

Leave a Comment