ಕೊಂಚಿಗೇರಿ ಬಳಿ ಒಡೆದ ತುಂಗಭದ್ರ ಎಲ್.ಎಲ್.ಸಿ ಕಾಲುವೆ

ಬಳ್ಳಾರಿ, ಸೆ.14: ತುಂಗಭದ್ರ ಬಲದಂಡೆ ಕೆಳಮಟ್ಟದ (ಎಲ್.ಎಲ್.ಸಿ) ಕಾಲುವೆ 60ನೇ ಕಿ.ಮಿ. ಬಳಿ ಒಡೆದು ಹೋಗಿದ್ದು ಅಪಾರ ಪ್ರಮಾಣದ ನೀರು ಹಳ್ಳ ಗದ್ದೆಗಳ ಮೂಲಕ ಗುಂಡಿಗನೂರು ಕೆರೆಗೆ ಹರಿದು ಸಾಗಿದೆ. ಇಂದರಿಂದ ಡ್ಯಾಂನಿಂದ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

ಸಿರುಗುಪ್ಪ ತಾಲೂಕಿನ ಕೊಂಚಿಗೇರಿ ಬಳಿಯ ಕಾಲುವೆಯ 60ನೇ ಕಿಲೋ ಮೀಟರ್ ಬಳಿಯ ಅಕ್ವಡೆಕ್ಟ್ ಪಕ್ಕದಲ್ಲಿ ಅಂದಾಜು 30 ಅಡಿ ಅಗಲ 10 ಅಡಿ ಆಳದಷ್ಟು ಕಾಲುವೆ ಬೆಳಗಿನ ಜಾವ ಒಡೆದಿದೆ.

ಇದರಿಂದ ನೀರು ಅಕ್ವಡೆಕ್ಟ್ ಮೂಲಕ ಕಾಲುವೆಯ ಎಡಭಾಗದಲ ಹಳ್ಳದ ಮೂಲಕ ಗುಂಡಿಗನೂರು ಕೆರೆಗೆ ಸೇರುತ್ತದೆ. ಕಾಲುವೆ ಒಡೆದಾಗ 2 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯುತ್ತಿತ್ತು ಎಂದು ಜಲಾಶಯದ ಮೂಲಗಳು ತಿಳಿಸಿದೆ.

ಸ್ಥಳಕ್ಕೆ ತುಂಗಭದ್ರ ಮಂಡಳಿ ಅಧಿಕಾರಿಗಳು ಆಗಮಿಸಿದ್ದು ಒಡೆದಿರುವುದನ್ನು ಮುಚ್ಚಲುಬೇಕಾದ ಕ್ರಮತೆಗೆದುಕೊಂಡಿದ್ದಾರೆ.

ಎರಡು ವರ್ಷದ ಹಿಂದೆ
ಕಳೆದ ಎರಡು ವರ್ಷದ ಹಿಂದೆ ಇದೇ ಸ್ಥಳದಲ್ಲಿ ಕಾಲುವೆಗೆ ಬೊಂಗಾ ಬಿದ್ದು 50 ಅಡಿಗೂ ಹೆಚ್ಚು ಉದ್ದ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಕೆರೆಗೆ ಹರಿದಿತ್ತು. ನಂತರ ದಂಡೆಯನ್ನು ಭದ್ರಗೊಳಿಸಲಾಗಿತ್ತು.

ಈ ಬಾರಿ ಗುಂಡಿಗನೂರು ಕೆರೆಗೆ ಮಳೆ ಅಭಾವದಿಂದ ಸಾಕಷ್ಟು ನೀರು ಸಂಗ್ರಹವಾಗದ ಕಾರಣ ಕೆರೆಯ ನೀರನ್ನು ಆಶ್ರಯಿಸಿರುವ ಅಚ್ಚುಕಟ್ಟು ರೈತರು ಒಡೆದಿರಬೇಕೆಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Leave a Comment