ಕೈ ಸಾರಥ್ಯ:ವೇಣು:ಡಿಕೆಶಿ ಚರ್ಚೆ

ನವದೆಹಲಿ, ಜ. ೨೫- ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್, ದೆಹಲಿಯಲ್ಲಿಂದು ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಡಿ.ಕೆ. ಶಿವಕುಮಾರ್ ಅವರ ಹೆಸರು ಅಂತಿಮವಾಗಿದೆ. ಇನ್ನೇನು ಪ್ರಕಟಿಸುವುದೊಂದೇ ಬಾಕಿ ಎನ್ನುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ. ಪಾಟೀಲ್ ಹೆಸರನ್ನು ಮುನ್ನೆಲೆಗೆ ತಂದ ಹಿನ್ನೆಲೆಯಲ್ಲಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕೆನ್ನುವ ಗೊಂದಲಕ್ಕೆ ಪಕ್ಷದ ಹೈಕಮಾಂಡ್ ಸಿಲುಕಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಯಲ್ಲಿನ ನಿಧಾನಗತಿಯ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಶೀಘ್ರ ಅಧ್ಯಕ್ಷರನ್ನು ನೇಮಕ ಮಾಡುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ವಿವರ ನೀಡಲು ಡಿ.ಕೆ. ಶಿವಕುಮಾರ್ ನಿರಾಕರಿಸಿದರು.
ಸದ್ಯ ದೆಹಲಿ ವಿಧಾನಸಭಾ ಚುನಾವಣೆಯ ಬ್ಯುಸಿಯಲ್ಲಿರುವ ಪಕ್ಷದ ಹೈಕಮಾಂಡ್ ಚುನಾವಣೆ ಮುಗಿದ ಬಳಿಕ ಈ ಬಗ್ಗೆ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.
ಅದಕ್ಕೂ ಮುನ್ನ ಮೂಲ ಮತ್ತು ವಲಸಿಗ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ-ಲಾಬಿಯ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ವೀಕ್ಷಕರನ್ನು ಕಳುಹಿಸಿ ಅಭಿಪ್ರಾಯ ಸಂಗ್ರಹಿಸುವುದು ಇಲ್ಲವೆ ದೆಹಲಿಗೆ ರಾಜ್ಯ ನಾಯಕರನ್ನು ಕರೆಸಿಕೊಂಡು ಎಲ್ಲರೊಂದಿಗೂ ಚರ್ಚೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿರೋಧ ಪಕ್ಷದ ನಾಯಕ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

Leave a Comment