ಕೈ ಶಾಸಕರಿಗೆ ಆಮಿಷ : ಐ.ಟಿ. ಎಸಿಬಿಗೆ ದೂರು: ಡಿಸಿಎಂ

ಬೆಂಗಳೂರು,ಸೆ. ೧೪- ರಾಜ್ಯದಲ್ಲಿರುವ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಗೊಳಿಸಲು ಕಾಂಗ್ರೆಸ್‌ನ ಕೆಲ ಶಾಸಕರಿಗೆ ಬಿಜೆಪಿ ನಾಯಕರು  ನೂರಾರು ಕೋಟಿ ರೂಪಾಯಿಗಳು ಆಮಿಷವೊಡ್ಡಿರುವ ಕುರಿತು ಆದಾಯ ತೆರಿಗೆ ಇಲಾಖೆ ಹಾಗೂ ಎಸಿಬಿಗೆ ಪಕ್ಷದ ವತಿಯಿಂದ ದೂರು ನೀ‌ಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಹೇಳಿದ್ದಾರೆ.

ಬಳ್ಳಾರಿಯ ಕೆಲವು ಪಕ್ಷದ ಶಾಸಕರಿಗೆ ಕೋಟಿ ಕೋಟಿ ಆಮಿಷವೊಡ್ಡಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬಿಜೆಪಿ ನಾಯಕರ ವಿರುದ್ಧ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕೋಟಿ ಕೋಟಿ ಆಫರ್ ನೀಡಿರುವ ಶಾಸಕರೇ ಈ ಬಗ್ಗೆ ತಮಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಮಾಧ್ಯಮಗಳಲ್ಲಿಬರುತ್ತಿರುವ ವರದಿಯನ್ನು ಆಧರಿಸಿ ಬಿಜೆಪಿ ವಿರುದ್ಧ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ಪರವಾಗಿ ದೂರು ನೀಡುವ ಬದಲು ಪಕ್ಷದ ವತಿಯಿಂದ ದೂರು ನೀಡಲಾಗುವುದು ಎಂದರು.

ಸರ್ಕಾರ ಸುಭದ್ರ

ಬಿಜೆಪಿನಾಯಕರು ಏನೆಲ್ಲಾ ಕಿತಾಪತಿ ಮಾಡಿ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರು. ಅದು ಸಫಲವಾಗುವುದಿಲ್ಲ. ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯ ಪಕ್ಷದ ನಾಯಕರು ಸಮಸ್ಯೆ ಬಹುತೇಕ ಬಗೆಹರಿದಿದೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ನಾಯಕರೊಂದಿಗೆ ಕುಳಿತು ಚರ್ಚಿಸಿ, ಬಗೆಹರಿಸಿಕೊಳ್ಳಲಾಗುವುದು. ನಮ್ಮಲ್ಲಿ ಗಂಭೀರ ಸಮಸ್ಯೆಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಸ್ಥಾನಕ್ಕೆ ಪೈಪೋಟಿ

ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಪಾಲಿನ ಕಾಂಗ್ರೆಸ್ಸಿನ ಸ್ಥಾನಕ್ಕಾಗಿ ಹಿರಿಯ ನಾಯಕರಲ್ಲಿ ಪೈಪೋಟಿ ನಡೆದಿದೆ. ಅದರಲ್ಲಿ ತಪ್ಪೇನಿದೆ ಎಂದು ಹೇಳಿದರು.

ಬೆಸ್ಟ್ ಫ್ರೆಂಡ್

ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನನಗೆ ಬೆಸ್ಟ್ ಫ್ರೆಂಡ್ ಈಗಲೂ ಅವರ ಜೊತೆ ನಾನು ಇದ್ದೇನೆ. ನನ್ನ ಸಂಕಷ್ಟದ ಸಮಯದಲ್ಲಿ ಅವರು ಜೊತೆಗಿದ್ದರು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಳಗಾವಿ ರಾಜಕಾರಣದಲ್ಲಿ ತಾವು ಮಧ್ಯ ಪ್ರವೇಶಿಸಿಲ್ಲ. ಅಲ್ಲದೆ ರಮೇಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ತಿಳಿಸಿದರು.

Leave a Comment