ಕೈ ಮುಖಂಡ ಸೆರೆ

ಹೋಟೆಲ್‌ಗೆ ಕಲ್ಲು ತೂರಿ ಹಾನಿಯೆಸಗಿದ್ದ!
ಮಂಗಳೂರು, ಸೆ.೧೨- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಸಂದರ್ಭದಲ್ಲಿ ನಗರದ ಕದ್ರಿ ಶಿವಭಾಗ್ ಬಳಿ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಟಿಪಳ್ಳ ೩ನೇ ಬ್ಲಾಕ್ ನಿವಾಸಿ ಅಮರ್ ಸೋನ್ಸ್(೨೮) ಎಂದು ಗುರುತಿಸಲಾಗಿದೆ. ಬಂದ್ ಸಂದರ್ಭ ಅಮರ್ ಸೋನ್ಸ್ ಮತ್ತು ಆತನ ಸಹಚರ ಬೈಕ್‌ನಲ್ಲಿ ಬಂದು ನಗರದ ಶಿವಭಾಗ್‌ನಲ್ಲಿರುವ ‘ಶಿವಭಾಗ್ ಕೆಫೆ’ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಯ ಕುರಿತು ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿದ ಕೃತ್ಯ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬನಿಗೆ ಶೋಧ ಮುಂದುವರಿದಿದೆ. ಬಂಧಿತ ಆರೋಪಿ ಅಮರ್ ಸೋನ್ಸ್ ಯುವ ಕಾಂಗ್ರೆಸ್ ಮುಖಂಡನಾಗಿದ್ದು ಜಿಲ್ಲಾ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಆಪ್ತ ಎಂದು ಹೇಳಲಾಗಿದೆ.

Leave a Comment