ಕೈ ಬಿಕ್ಕಟ್ಟಿಗೆ ಡಿಸಿಎಂ ತೇಪೆ : ಕಾಂಗ್ರೆಸ್ ಸಚಿವರ ಜತೆ ಬೆಳಗಿನ ಉಪಹಾರ ಸಭೆ ನಡೆಸಿ ಚರ್ಚೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೭- ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟ್ಟು, ಭಿನ್ನಮತ, ಗುಂಪುಗಾರಿಕೆಗಳಿಗೆ ತೆರೆ ಎಳೆದು, ಪಕ್ಷದಲ್ಲಿ ಒಗ್ಗಟ್ಟಿದ್ದು, ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ತಲುಪಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದು ಕಾಂಗ್ರೆಸ್ ಸಚಿವರುಗಳೊಂದಿಗೆ ಉಪಾಹಾರ ಸಭೆ ನಡೆಸಿ ರಾಜ್ಯ ರಾಜಕೀಯದ ಆಗು-ಹೋಗುಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿಗಳ ಸ್ವಂತ ನಿವಾಸದಲ್ಲಿಂದು ಕಾಂಗ್ರೆಸ್ ಸಚಿವರುಗಳೊಂದಿಗೆ ಉಪಾಹಾರ ಸೇವಿಸಿ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಬೇಗುದಿ, ಭಿನ್ನಮತಗಳಿಗೆ ತೆರೆ ಎಳೆಯುವ ಸಂಬಂಧ ಚರ್ಚೆ ನಡೆಸಿದರು.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಚಾರ ಬೀದಿ ರಂಪವಾಗಿ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗುವ ರೀತಿಯಲ್ಲಿ ಬೆಳವಣಿಗೆಗಳು ನಡೆದಿರುವ ಬಗ್ಗೆ ಪಕ್ಷದ ಹೈಕಮಾಂಡ್ ಗರಂ ಆಗಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಚಿವರುಗಳ ಸಭೆ ಕರೆದು, ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಲು ಈ ಸಭೆ ನಡೆಸಿದರು ಎಂದು ಹೇಳಲಾಗುತ್ತಿದೆ.

ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮ್ಮಿಶ್ರ ಸರ್ಕಾರವನ್ನು ರಚಿಸಲಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ಪಥನವಾಗದಂತೆ ಎಚ್ಚರವಹಿಸಲಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಂದಾಗಿ ಕೆಲಸ ಮಾಡುವ ಅಗತ್ಯತೆಯನ್ನು ಪ್ರತಿಪಾದಿಸಿದರು.

ಸಮ್ಮಿಶ್ರ ಸರ್ಕಾರ ನೂರು ದಿನ ಪೂರೈಸಿದ್ದರೂ ಕೆಲ ಸಚಿವರು ಸೇರಿದಂತೆ ಕಾಂಗ್ರೆಸ್‌ನ ಕೆಲ ಶಾಸಕರಿಗೆ ಸರ್ಕಾರದ ಬಗ್ಗೆ ಅಸಮಾಧಾನ ಇದ್ದೇ ಇದೆ. ಹಾಗಾಗಿ ಇವರೆಲ್ಲರ ಅಸಮಾಧಾನಕ್ಕೆ ಮದ್ದು ಅರೆಯುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗಳನ್ನು ನಡೆಸಬೇಕಾಗಿದೆ. ಹಾಗಾಗಿ ಸಚಿವರುಗಳು ಯಾವುದೇ ಅಸಮಾಧಾನಗಳನ್ನು ಹೊರ ಹಾಕದೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವಂತೆಯೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಭೆಯಲ್ಲಿ ಸಲಹೆ ಮಾಡಿದರು ಎನ್ನಲಾಗಿದೆ.

ಹೊಂದಾಣಿಕೆ

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗದ ಕಡೆ ಜೆಡಿಎಸ್ ಜತೆ ಸೇರಿ ಅಧಿಕಾರ ಹಿಡಿಯುವ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ರಾಜ್ಯದಲ್ಲಿ ಜೆಡಿಎಸ್ ಜತೆ ಸೇರಿ ಸರ್ಕಾರ ಮಾಡಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲೂ ಅದೇ ಸೂತ್ರವನ್ನು ಪಾಲಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಇಂದಿನ ಸಚಿವರುಗಳ ಸಭೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್‌ಗುಂಡೂರಾವ್ ಪಾಲ್ಗೊಂಡಿದ್ದರು. ಸಚಿವರುಗಳಾದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಶಿವಾನಂದಪಾಟೀಲ್, ವೆಂಕಟರಮಣಪ್ಪ, ರಾಜಶೇಖರಪಾಟೀಲ್, ಕೃಷ್ಣಬೈರೇಗೌಡ, ಪುಟ್ಟರಂಗಶೆಟ್ಟಿ, ಪ್ರಿಯಾಂಕಖರ್ಗೆ, ಜಮೀರ್ ಅಹಮದ್, ಆರ್.ಶಂಕರ್ ಪಾಲ್ಗೊಂಡಿದ್ದರು.

ವಿದೇಶ ಪ್ರವಾಸದಲ್ಲಿರುವ ಕಾರಣ ಸಚಿವ ಆರ್.ವಿ. ದೇಶಪಾಂಡೆ, ಕೃಷಿ ಸಚಿವ ಶಿವಶಂಕರರೆಡ್ಡಿ ಸಭೆಗೆ ಗೈರು ಹಾಜರಾಗಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಮಂಗಳೂರಿನಲ್ಲಿಂದು ನಡೆದಿರುವ ಕಾರ್ಯಕ್ರಮಗಳಲ್ಲಿ ಸಚಿವರಾದ ಯು.ಟಿ. ಖಾದರ್ ಮತ್ತು ಜಯಮಾಲಾ ಭಾಗಿಯಾಗಿರುವುದರಿಂದ ಇವರಿಬ್ಬರೂ ಸಹ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ರಮೇಶ್ ಜಾರಕಿ ಹೊಳಿ ಸಹ ಸಭೆಗೆ ಗೈರುಹಾಜರಾಗಿದ್ದರು. ಸಂಸದ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು.

Leave a Comment