ಕೈ ಕೊಡುವವರಾರು ಹಿಡಿಯುವರಾರು: ಶಾಸಕರ ನಾನಾ ರೀತಿಯ ವ್ಯಾಖ್ಯಾನ

ಬೆಂಗಳೂರು, ಜು. ೧೮- ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಯ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುತ್ತಾರೋ, ಸೋಲುತ್ತಾರೋ, ಯಾವ ಶಾಸಕರು ಕೈ ಕೊಡುತ್ತಾರೆ, ಯಾವ ಶಾಸಕರು ಕೈ ಹಿಡಿಯುತ್ತಾರೆ ಎಂಬುದು ವಿಧಾನಸಭೆಯ ಮೊಗಸಾಲೆಯಲ್ಲಿ ಶಾಸಕರ ನಡುವೆ ಚರ್ಚೆಯಾಗುತ್ತಿದ್ದ ವಿಷಯ.
ವಿಧಾನಸಭೆಯ ಕಲಾಪಕ್ಕೆ ತಾವು ತಂಗಿದ್ದ ರೆಸಾರ್ಟ್‌ಗಳಿಂದ ಇಂದೂ ಸಹ ಬಸ್‌ನಲ್ಲೇ ಒಟ್ಟಾಗಿ ಕಲಾಪಕ್ಕೆ ಆಗಮಿಸಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರುಗಳು ಮೊಗಸಾಲೆಯಲ್ಲಿ ಕುಳಿತು ಸರ್ಕಾರದ ಭವಿಷ್ಯ, ವಿಶ್ವಾಸಮತ ಯಾಚನೆ ಯಶಸ್ವಿಯಾಗುತ್ತಾ, ಫೇಲ್ ಆಗುತ್ತಾ ಎಂಬ ಚರ್ಚೆಯಲ್ಲಿ ತೊಡಗಿದ್ದರು.
ಎಲ್ಲ ಶಾಸಕರ ಮೊಗದಲ್ಲೂ ಒಂದು ರೀತಿಯ ಕುತೂಹಲ, ದುಗುಡ-ದುಮ್ಮಾನ ಮನೆ ಮಾಡಿತ್ತು. ಏನಾಗುತ್ತದೋ ಎಂಬ ಆತಂಕ ಎದ್ದು ಕಾಣುತ್ತಿತ್ತು, ನಮ್ಮ ಕಡೆ ಯಾರು ಕೈಕೊಡುತ್ತಾರೆ, ಯಾರು ಯಾವ ಕಡೆ ಹೋಗುತ್ತಾರೆ ಎಂಬ ಬಗ್ಗೆಯೂ ಮೂರು ಪಕ್ಷಗಳ ಶಾಸಕರುಗಳು ಪರಸ್ಪರ ಮೇಲು ದ್ವನಿಯಲ್ಲಿ ಮಾತನಾಡಿಕೊಳ್ಳುತ್ತಿದ್ದದು ಸಾಮಾನ್ಯವಾಗಿತ್ತು.
ವಿರೋಧ ಪಕ್ಷದ ಮೊಗಸಾಲೆಯಲ್ಲಿ ಕುಳಿತಿದ್ದ ಬಿಜೆಪಿ ಸದಸ್ಯರು ಯಾವಾಗ ವಿಶ್ವಾತಮತ ಯಾಚನೆ ಮುಗಿಯುತ್ತ ಎಷ್ಟು ದಿನ ಹಿಡಿಯುತ್ತದೆ ನಮ್ಮ ಶಾಸಕರು ಎಲ್ಲಿಗೂ ಹೋಗಿಲ್ಲ ಎಂದು ಮಾತನಾಡಿಕೊಂಡರೆ, ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಇಬ್ಬರು ಶಾಸಕರು ಕೈ ಕೊಟ್ಟಿದ್ದಾರಂತೆ ಇನ್ನು ಎಷ್ಟು ಜನ ಕೈ ಕೊಡುತ್ತಾರೆ. ದೋಸ್ತಿ ಪಕ್ಷಗಳಲ್ಲಿ ಒಗ್ಗಟ್ಟು ಉಳಿಯುತ್ತದೆಯೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು.
ಇಂದಿನ ಕಲಾಪಕ್ಕೆ ಬಿಜೆಪಿಯ ಎಲ್ಲ ಸದಸ್ಯರು ಹಾಜರಾಗಿದ್ದರೆ, ರಾಜೀನಾಮೆ ನೀಡಿರುವ ಶಾಸಕರನ್ನು ಹೊರತುಪಡಿಸಿ ದೋಸ್ತಿ ಪಕ್ಷದಲ್ಲಿ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದಾರೆ.
ಇಂದು ವಿಧಾನಸಭೆಯ ಕೋರಂ ಗಂಟೆ ಭಾರಿಸುವ ಮೊದಲೆ ಹಲವು ಶಾಸಕರು ಸದನದಲ್ಲಿ ಹಾಜರಾಗಿದ್ದು ವಿಶೇಷ.
ಸದನ ಆರಂಭಕ್ಕೂ ಮನ್ನ ಬಿಜೆಪಿ ಶಾಸಕರುಗಳಾದ ಮಾಧುಸ್ವಾಮಿ, ಬಸವರಾಜಬೊಮ್ಮಾಯಿ ಇವರ ನೇತೃತ್ವದ ನಿಯೋಗ ಸಭಾಧ್ಯಕ್ಷರನ್ನು ಭೇಟಿ ಮಾಡಿ ವಿಶ್ವಾಸಮತ ಯಾಚನೆಗೆ ಒಂದು ಕಾಲಮಿತಿ ನಿಗದಿ ಮಾಡುವಂತೆ ಮನವಿ ಮಾಡಿದರು.
ಇದಾದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಸಭಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಿದರು.
ಸದನ ಕಲಾಪ ಆರಂಭಕ್ಕೂ ಮುನ್ನ ಯಡಿಯೂರಪ್ಪನವರು ತಮ್ಮ ವಿರೋಧ ಪಕ್ಷದ ಶಾಸಕರ ಕೊಠಡಿಯಲ್ಲಿ ಬಿಜೆಪಿ ಶಾಸಕರ ಜತೆ ಚರ್ಚೆ ನಡೆಸಿದರು.
ಯಡಿಯೂರಪ್ಪ ಹೇಳಿಕೆ
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪನವರು, ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕರ ಬೆಂಬಲ ಕಳೆದುಕೊಂಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಬಿಜೆಪಿ ಶಾಸಕರು 105 ಇದ್ದೇವೆ. ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆ ಕುಸಿದಿದೆ. ಹಾಗಾಗಿ ಅವರು ರಾಜೀನಾಮೆ ನೀಡುವುದು ಸೂಕ್ತ ಎಂದರು.
 ಬೊಮ್ಮಾಯಿ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಬಸವರಾಜಬೊಮ್ಮಾಯಿ, ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೂ ಮೊದಲೇ ರಾಜೀನಾಮೆ ನೀಡಿದರೆ ಒಳ್ಳೆಯದು ಎಂದರು.

Leave a Comment