ಕೈ, ಕಮಲ ಹಾವು- ಏಣಿ ಆಟ : ಒಂದೆಡೆ ಬಿಜೆಪಿ ಕಾರ್ಯತಂತ್ರ ಮತ್ತೊಂದೆಡೆ ದೋಸ್ತಿ ರಣತಂತ್ರ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೧೨- ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಹಾವು-ಏಣಿ ಆಟದಂತೆ ಸಾಗಿದೆ. ಒಂದೆಡೆ, ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದರೆ, ಮತ್ತೊಂದೆಡೆ ಬಿಜೆಪಿ ಅತೃಪ್ತ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ -ಜೆಡಿಎಸ್ ನಾಯಕರು ಹೇಳಿಕೊಳ್ಳುತ್ತಿರುವುದು ರಾಜಕೀಯ ಬೆಳವಣಿಗೆ, ಕುತೂಹಲ ಕೆರಳಿಸಿದೆ.

ಲೋಕಸಭಾ ಚುನಾವಣೆಗೆ ಮುನ್ನವೇ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರವನ್ನು ಉಲ್ಟಾಪಲ್ಟ ಮಾಡಲು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಕಾರ್ಯೋನ್ಮುಖರಾಗಿ ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ.

ಜಾರಕಿಹೊಳಿ ಸಹೋದರರು ಮಾತ್ರವಲ್ಲದೆ, ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ. ಪಕ್ಷದ ವರಿಷ್ಠರ ಜೊತೆ ಸತತ ಸಂಪರ್ಕದಲ್ಲಿರುವ ಯಡಿಯೂರಪ್ಪ, ಹೈಕಮಾಂಡ್‌ನ ಅಣತಿಯಂತೆ ಎಲ್ಲವನ್ನು ನಿಭಾಯಿಸುತ್ತಿದ್ದಾರೆ. ಇಂದು ಕೂಡ ಯಡಿಯೂರಪ್ಪರವರು ತಮ್ಮ ನಿವಾಸದಲ್ಲಿ ತಮ್ಮ ಆಪ್ತ ಶಾಸಕರ ಸಭೆ ನಡೆಸಿ ರಾಜಕೀಯ ಆಗುಹೋಗುಗಳ ಚರ್ಚೆ ನಡೆಸಿದರು.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣಾ ವಿದ್ಯಮಾನಗಳ ನಂತರ ಕಾಂಗ್ರೆಸ್ ನಾಯಕರ ವಿರುದ್ಧ ಸಿಡಿದೆದ್ದಿರುವ ಜಾರಕಿಹೊಳಿ ಬ್ರದಱ್ಸ್ ಜೊತೆ ಬಿಜೆಪಿಯ ಶ್ರೀರಾಮುಲು ಸತತ ಸಂಪರ್ಕದಲ್ಲಿದ್ದು, ಇವರುಗಳನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳು ಮುಂದುವರೆದಿದೆ. ಜಾರಕಿಹೊಳಿ ಬ್ರದಱ್ಸ್ ಬಿಜೆಪಿಗೆ ಬರುವುದು ಖಚಿತತೆ ಸ್ಪಷ್ಟವಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಅದರಲ್ಲೂ ಬೆಳಗಾವಿ ರಾಜಕಾರಣದ ಮೇಲೆ ಬಿಗಿ ಹಿಡಿತ ಸಾಧಿಸಲು ಜಾರಕಿಹೊಳಿ ಬ್ರದಱ್ಸ್ ಪಕ್ಷ ಬಿಡುವ ಬೆದರಿಕೆ ಮೂಲಕ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಜಾರಕಿಹೊಳಿ ಬ್ರದಱ್ಸ್ ಬಿಜೆಪಿ ಸೇರುವುದು ಬೆಳಗಾವಿಯ ಬಿಜೆಪಿ ನಾಯಕರಿಗೆ ಸುತಾರಾಂ ಇಷ್ಟವಿಲ್ಲ. ಇಷ್ಟು ದಿನ ಲಿಂಗಾಯತ ವಿರೋಧಿ ರಾಜಕಾರಣ ಮಾಡಿಕೊಂಡು ಬಂದಿರುವ ಜಾರಕಿಹೊಳಿ ಬ್ರದಱ್ಸ್‌ರನ್ನು ಬಿಜೆಪಿ ಅಪ್ಪಿಕೊಳ್ಳುವುದಕ್ಕೂ ಬಿಜೆಪಿಯ ಕೆಲ ಲಿಂಗಾಯತ ಮುಖಂಡರು ಒಳಗೊಳಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಜಾರಕಿಹೊಳಿ ಬ್ರಜಱ್ಸ್ ಬಿಜೆಪಿ ಪ್ರವೇಶ ಅನಿಶ್ಚತತೆಯಿಂದ ಕೂಡಿದೆ. ಆದರೆ, ಜಾರಕಿಹೊಳಿ ಬ್ರದಱ್ಸ್ ಜೊತೆಗಿರುವ 8-10 ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದು, ಇವರಿಗೆ ಬಿಜೆಪಿ ಗಾಳ ಹಾಕಿದೆ.

ಜಾರಕಿಹೊಳಿ ಬ್ರದಱ್ಸ್ ಜೊತೆ ಗುರುತಿಸಿಕೊಂಡಿರುವ 8-10 ಶಾಸಕರು ಲಿಂಗಾಯತ ಸಮುದಾಯ ಪ್ರಬಲವಾಗಿರುವ ಕ್ಷೇತ್ರಗಳಿಂದ ಆಯ್ಕೆಯಾದವರು. ಹಾಗಾಗಿ, ಮರು ಚುನಾವಣೆಯಲ್ಲಿ ಇವರನ್ನು ಗೆಲ್ಲಿಸಿಕೊಂಡು ಬರುವುದು ಸುಲಭ ಎಂಬ ಕಾರಣಕ್ಕೆ ಬಿಜೆಪಿ ಇವರಿಗೆ ಗಾಳ ಹಾಕಿದೆ ಎಂದು ಹೇಲಾಗುತ್ತಿದೆ.

ಸಮ್ಮಿಶ್ರ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಆದಷ್ಟು ಶೀಘ್ರ ಸರ್ಕಾರ ಪತನ ನಿಶ್ಚಿತ ಎಂದು ಬಿಜೆಪಿ ನಾಯಕರುಗಳು ಹೇಳುತ್ತಿದ್ದಾರೆ. ಆದರೆ ಯಾವಾಗ ಸರ್ಕಾರ ಪತನ ಎಂಬುದಕ್ಕೆ ಖಚಿತವಾಗಿ ಹೇಳುವ ಧೈರ್ಯ ಬಿಜೆಪಿ ನಾಯಕರಲ್ಲಿ ಇಲ್ಲ. ಯಾವಾಗ ಏನಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಕೂಡ ಯಾರಲ್ಲು ಇಲ್ಲ. ಎಲ್ಲ ಗೊಂದಲದಿಂದ ಕೂಡಿದೆ.

ಪ್ರತಿತಂತ್ರ

ಸಮ್ಮಿಶ್ರ ಸರ್ಕಾಕ ಅಸ್ಥಿರಗೊಳಿಸಲು ಬಿಜೆಪಿ ನಡೆಸಿರುವ ತಂತ್ರಕ್ಕೆ ಕಾಂಗ್ರೆಸ್ -‌ಜೆಡಿಎಸ್ ನಾಯಕರು ಪ್ರತಿತಂತ್ರ ಹೆಣೆದಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದರೆ, ನಾವು ಬಿಜೆಪಿ ಶಾಸಕರನ್ನು ಸೆಳೆಯುತ್ತೇವೆ. 8-10 ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಕಾದು ನೋಡಿ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಹಿರಂಗವಾಗಿಯೇ ಗುಡುಗಿದ್ದಾರೆ.

ಹಾಗಾಗಿ, ಸರ್ಕಾರ ಉರುಳುತ್ತದೋ  ಉಳಿಯುತ್ತದೋ ಎಂಬುದು ಗೊಂದಲದ ಗೂಡಾಗಿದೆ ರಾಜ್ಯರಾಜಕಾರಣದಲ್ಲಿನ ಈ ಹಾವು-ಏಣಿ ಆಟದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತದೋ ಇಲ್ಲ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಬಿಜೆಪಿಗೆ ತಿರುಗೇಟು ನೀಡುತ್ತದೆಯೋ ಎಂಬುದು ಒಂದೆರೆಡು ದಿನಗಳಲ್ಲಿ ತಿಳಿಯಲಿದೆ.

ಅನುಮಾನಕ್ಕೀಡಾದ ನಡೆ

ಕಾಂಗ್ರೆಸ್ ಪಾಳಯದಲ್ಲಿ ಜಾರಕಿಹೊಳಿ ಸಹೋದರರ ನಡೆ ತೀವ್ರ ಅನುಮಾನ ಹಾಗೂ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವುದಾಗಿ ಹೇಳಿ ಖರ್ಗೆ ಅವರನ್ನು ಭೇಟಿ ಮಾಡದೆ ರಮೇಶ್ ಜಾರಕಿಹೊಳಿ ಅಂಗರಕ್ಷಕರನ್ನು ಬಿಟ್ಟು ಒಬ್ಬರೆ ಅಜ್ಞಾತ ಸ್ಥಳಕ್ಕೆ ತೆರಳಿರುವುದು ಕುತೂಹಲ ಕೆರಳಿಸಿದೆ.

ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ತಡರಾತ್ರಿ ಶಾಸಕರಾದ ಸುಧಾಕರ್, ನಾಗೇಂದ್ರ, ಸುಬ್ಬಾರೆಡ್ಡಿ, ಎಂ.ಟಿ.ಬಿ ನಾಗರಾಜ್, ನಾಗೇಶ್ ಹಾಗೂ ಡಾ. ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವರ ಜತೆ ಸಭೆ ನಡೆಸಿ ಇಂದು ಅಜ್ಞಾತ ಸ್ಥಳಕ್ಕೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

Leave a Comment