ಕೈತಪ್ಪಿದ್ದ ಟಿಕೆಟ್ ಆಕಾಂಕ್ಷಿಗಳ ಆಕ್ರೋಶ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಏ. ೧೬- ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಪಕ್ಷದಲ್ಲಿ ಅಸಮಾಧಾನ, ಆಕ್ರೋಶ ಸ್ಪೋಟಗೊಂಡಿದ್ದು, ಟಿಕೆಟ್ ಕೈ ತಪ್ಪಿದ ಆಕಾಂಕ್ಷಿಗಳ ಬೆಂಬಲಿಗರು ಪ್ರತಿಭಟನೆ ನಡೆಸಿ, ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೆಲವೆಡೆ ರಸ್ತೆ ತಡೆ, ಟೈರ್‌ಗೆ ಬೆಂಕಿ ಹಚ್ಚಿರುವ ಪ್ರಕರಣಗಳು ನಡೆದಿವೆ.

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸಿ ಮುಖಂಡರ ಜಟಾಪಟಿಗಳ ನಡುವೆಯೇ ಕಾಂಗ್ರೆಸ್ ವರಿಷ್ಠರು ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡುತ್ತಿದ್ದಂತೆಯೇ ಅಸಮಾಧಾನ ಸ್ಪೋಟಗೊಂಡಿದೆ.

ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 11 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಅವರೆಲ್ಲ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ತಮ್ಮ ನಾಯಕರುಗಳಿಗೆ ಟಿಕೆಟ್ ಕೈತಪ್ಪಿದ್ದಕ್ಕಾಗಿ ಮಾಜಿ ಶಾಸಕರು ಹಾಗೂ ಮುಖಂಡರುಗಳ ಬೆಂಬಲಿಗರು ಪ್ರತಿಭಟನೆ ನಡೆಸಿ ಪಕ್ಷದ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ 11 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿದ್ದು, ಈ ಹಾಲಿ ಶಾಸಕರುಗಳ ಕ್ಷೇತ್ರಗಳಲೆಲ್ಲಾ ಪ್ರತಿಭಟನೆಗಳು ನಡೆದಿವೆ.

ಹಾಲಿ ಶಾಸಕರಾದ ಬಾದಾಮಿಯ ಚಿಮ್ಮನಕಟ್ಟಿ, ತಿಪಟೂರಿನ ಕೆ. ಷಡಕ್ಷರಿ, ತರೀಕೆರೆಯ ಹೆಚ್.ಜಿ. ಶ್ರೀನಿವಾಸ್, ಮಾಯಕೊಂಡದ ಶಿವಮೂರ್ತಿನಾಯಕ್, ಬ್ಯಾಡಗಿಯ ಬಸವರಾಜ ನೀಲಣ್ಣ ಶಿವಣ್ಣನವರ್, ಹಾನಗಲ್‌ನ ಮನೋಹರ ತಹಶೀಲ್ದಾರ್, ವಿಜಯಪುರದ ಮಕುಲ್ ಭಗವಂತ್, ಜಗಳೂರಿನ ರಾಜೇಶ್, ಸಿರಗುಪ್ಪದ ಬಿ.ಎಂ.ನಾಗರಾಜ್, ಕೊಳ್ಳೆಗಾಲದ ಜಯಣ್ಣ, ಕಲುಬುರ್ಗಿ ಗ್ರಾಮಾಂತರದ ಬಿ. ರಾಮಕೃಷ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದರು, ಟಿಕೆಟ್ ನೀಡದ ಬಗ್ಗೆ ಈ ಹಾಲಿ ಶಾಸಕರು ಸಿಟ್ಟಾಗಿದ್ದು, ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಂದೇಶವನ್ನು ರವಾನಿಸಿದ್ದಾರೆ.

ಟಿಕೆಟ್ ನಿರಾಕರಿಸಲಾಗಿರುವ ಶಾಸಕರಾದ ಬಾದಾಮಿಯ ಚಿಮ್ಮನಕಟ್ಟಿ, ಶಿರುಗಪ್ಪದ ನಾಗರಾಜ್ ಇಂದು ಬೆಳಗ್ಗೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೆಟ್ ನೀಡದಿದ್ದಕ್ಕೆ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜತೆ ಚರ್ಚೆ ನಡೆಸಿದ್ದೇನೆ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ಯಾರಿಗೂ ತಮ್ಮ ಕ್ಷೇತ್ರವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಚಿಮ್ಮನಕಟ್ಟಿ ಹೇಳಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ವಿಶ್ವಾಸವಿದೆ. ಕಾಯ್ದು ನೋಡುತ್ತೇನೆ. ಟಿಕೆಟ್ ನೀಡದಿದ್ದರೆ ಬೆಂಬಲಿಗರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಶಿರಗುಪ್ಪ ಶಾಸಕ ನಾಗರಾಜು ಹೇಳುವ ಮೂಲಕ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದರು.

ಅದೇ ರೀತಿ ಶಾಸಕರಾದ ಬಸವರಾಜ ನೀಲಣ್ಣ ಶಿವಣ್ಣನವರ್, ತಿಪಟೂರಿನ ಷಡಕ್ಷರಿ, ಮಾಯಸಂದ್ರದ ಶಿವಮೂರ್ತಿ ಇವರುಗಳು ಸಹ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಕಣ್ಣೀರು ಹಾಕಿದ ಬೆಂಬಲಿಗ

ಹಾಲಿ ಶಾಸಕ ಬಸವರಾಜ ನೀಲಣ್ಣ ಶಿವಣ್ಣನವರ್‌ಗೆ ಟಿಕೆಟ್ ಕೈ ತಪ್ಪಿದ್ದರಿಂದ ಅವರ ಬೆಂಬಲಿಗರು ಆಕ್ರೋಶಗೊಂಡಿದ್ದು, ಅವರ ಕಟ್ಟಾ ಬೆಂಬಲಿಗ ಒಬ್ಬ ಕಣ್ಣೀರು ಹಾಕಿ ಶಾಸಕರನ್ನು ತಬ್ಬಿಕೊಂಡು ಗಳಗಳನೆ ಅತ್ತ ಪ್ರಸಂಗವೂ ನಡೆದಿದೆ.

ಆತ್ಮಹತ್ಯೆಗೆ ಯತ್ನ

ತಿಪಟೂರಿನ ಶಾಸಕ ಷಡಕ್ಷರಿ ಅವರಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಅವರ ಬೆಂಬಲಿಗರೊಬ್ಬರು ತಿಪಟೂರಿನ ಪೈ ಓವರ್ ಬಳಿ ನಡೆದ ಪ್ರತಿಭಟನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. ತಿಪಟೂರು ಬಂದ್ ನಡೆಸಿ ಷಡಕ್ಷರಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಕಿ ಹಚ್ಚಿ ಪ್ರತಿಭಟನೆ

ನೆಲಮಂಗಲದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಅಂಜನಮೂರ್ತಿ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅವರ ಬೆಂಬಲಿಗರು ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಹಾನಗಲ್‌ನಲ್ಲಿ ಶಾಸಕ ಮನೋಹರ್ ತಹಶೀಲ್ದಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಇಂದು ಹಾನಗಲ್ ಬಂದ್‌ಗೆ ಕರೆ ನೀಡಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗಳೂರು ಕ್ಷೇತ್ರದ ಹೆಚ್. ಬಿ. ರಾಜೇಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಆಕ್ರೋಶಗೊಂಡ ಅವರ ಬೆಂಬಲಿಗರು ಶಾಸಕರ ಜತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ದಾವಣಗೆರೆ ನಿವಾಸಕ್ಕೆ ಆಗಮಿಸಿ ಸಚಿವರನ್ನು ಭೇಟಿ ಮಾಡಿ ಆಕ್ರೋಶ ಹೊರ ಹಾಕಿದರು.

ಬಾಗೇಪಲ್ಲಿ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಂ. ಸಂಪಂಗಿ ಟಿಕೆಟ್ ಕೈ ತಪ್ಪಿದ್ದಕ್ಕಾಗಿ ಕಣ್ಣೀರು ಇಟ್ಟಿದ್ದಾರೆ. ಅವರ ಬೆಂಬಲಿಗರು ಸಹ ಪ್ರತಿಭಟನೆ ನಡೆಸಿದರು. ಸಂಪಂಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಹೆಚ್ಚಳವಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ಉದ್ಯಮಿ ಉದಯಶಂಕರ್ ಶೆಟ್ಟಿ ಕೈ ಟಿಕೆಟ್ ತಪ್ಪಿದ್ದರಿಂದ ಸಂಸದ ವೀರಪ್ಪಮೊಯ್ಲಿಯವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಕೆಪಿಸಿಸಿ ಕಛೇರಿ ಮುಂಭಾಗ ರಾಜಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುಳಾ ನಾಯ್ಡು ಬೆಂಬಲಿಗರು ಹಾಗೂ ಮಹಾಲಕ್ಷ್ಮೀ ಬಡಾವಣೆಯ ಕೈ ಟಿಕೆಟ್ ಆಕಾಂಕ್ಷಿ ಗಿರೀಶ್ ಬೆಂಬಲಿಗರು ತಮ್ಮ ನಾಯಕರಿಗೆ ಟಿಕೆಟ್ ತಪ್ಪಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮಂಜುಳಾ ನಾಯ್ಡು ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

Leave a Comment