ಕೈಕೊಟ್ಟು ಕಮಲ ಹಿಡಿಯಲು ಮುಂದಾದ ಲಾಡ್

ಬಳ್ಳಾರಿ, ಸೆ. ೨೭- ಹೌದು ತಾವು ಕಾಂಗ್ರೆಸ್ ತೊರೆದು, ಬಿಜೆಪಿ ಸೇರುವುದು ಖಚಿತ, ಸಚಿವ ಶ್ರೀರಾಮುಲು ಮತ್ತು ಮಾಜಿ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಸೇರಲಿದ್ದೇನೆ ಎಂದು ನಗರದ ಮಾಜಿ ಶಾಸಕ ಅನಿಲ್ ಲಾಡ್ ಸಷ್ಟಪಡಿಸಿದ್ದಾರೆ.

ಅವರಿಂದು ಸಂಜೆವಾಣಿಯೊಂದಿಗೆ ಮಾತನಾಡಿ, ಹೌದು ನಿನ್ನೆ ವಾಟ್ಸಪ್ ನಲ್ಲಿ ನನ್ನ ಅಭಿಮಾನಿಗಳಿಗೆ ಕಾಂಗ್ರೆಸ್ ಪಕ್ಷ ತೊರೆಯುವ ಮತ್ತು ಬಿಜೆಪಿ ಸೇರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದೆ.

ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದನ್ನೆಲ್ಲಾ ಪರಿಗಣಿಸಿ ಬಿಜೆಪಿ ಸೇರುವೆ ಎಂದು ಹೇಳಿದರು. ಜೆಡಿಎಸ್ ನಲ್ಲಿದ್ದ ನನಗೆ ಬಿಜೆಪಿಯವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಕರೆದು ಟಿಕೆಟ್ ನೀಡಿದ್ದರು. 2004ರಲ್ಲಿ ಶಾಸಕನಾದೆ. ಕ್ಷೇತ್ರ ಮರು ವಿಂಗಡಣೆಯಿಂದ 2008ರಲ್ಲಿ ಬಳ್ಳಾರಿ ನಗರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತೆ ಆದರೂ ಎದೆಗುಂದದೆ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿ ಪಕ್ಷ ಕಟ್ಟಿದ ನಾನು 2013ರಲ್ಲಿ ಬಳ್ಳಾರಿ ನಗರ ಶಾಸಕನಾದೆ. ಆದರೆ ಕಾಂಗ್ರೆಸ್ ಪಕ್ಷ ನನಗೆ ಸೂಕ್ತಸ್ಥಾನಮಾನ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಪಕ್ಷ ತೊರೆಯುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿರುವೆ. ಪಕ್ಷ ಬಿಡಬೇಡಿ ಎಂದು ಬುದ್ಧಿಮಾತು ಹೇಳಿದರು. ಆದರೂ ಕಾಂಗ್ರೆಸ್‌ಗೆ ಗುಡ್ ಬೈ ಹೇಳುವೆ ಎಂದು ಹೇಳಿದರು.

ಚರ್ಚೆ
ಬಿಜೆಪಿಗೆ ಸೇರಲು ಈಗಾಗಲೇ ಆನಂದ್ ಸಿಂಗ್ ಮತ್ತು ಶ್ರೀರಾಮುಲು ಜೊತೆ ಚರ್ಚೆ ಮಾಡಿರುವೆ ಅದಕ್ಕೆ ಅವರು ಸಮ್ಮತಿ ನೀಡಿದ್ದಾರೆಂದರು. ನೀವು ಬಿಜೆಪಿಗೆ ಬರುವುದನ್ನು ನಗರ ಶಾಸಕ ಸೋಮಶೇಖರರೆಡ್ಡಿ ವಿರೋಧಿಸುವುದಿಲ್ಲವೇ ಎಂಬ ಪ್ರಶ್ನೆಗೆ ಯಾಕೆ ವಿರೋಧಿಸುತ್ತಾರೆ. ನಾನೇನು ಇಲ್ಲಿಂದ ಸ್ಪರ್ಧೆ ಮಾಡಲು ಟಿಕೆಟ್ ಕೇಳಲ್ಲ, ಪಕ್ಷ ಬಯಸಿದರೆ ಖಾನಾಪುರದಿಂದ ಸ್ಪರ್ಧಿಸುವೆ. ಅಲ್ಲದೆ ಬರುವ ಪಾಲಿಕೆ ಚುನಾವಣೆಯಲ್ಲಿ ನಾನು ಬಿಜೆಪಿ ಸೇರಿದರೆ ಬಿಜೆಪಿಗೆ ಮತ್ತಷ್ಟು ಬಲ ಬರಲಿದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪಕ್ಷಕ್ಕೆ ಬಿಟ್ಟಿದ್ದು
ಅನಿಲ್ ಲಾಡ್ ಅವರು ಬಿಜೆಪಿ ಪಕ್ಷಕ್ಕೆ ಬರುವುದು ಅವರಿಗೆ ಬಿಟ್ಟಿದ್ದು ಅವರನ್ನು ಬರಮಾಡಿಕೊಳ್ಳುವುದಕ್ಕೆ ನನ್ನ ವಿರೋಧವಿಲ್ಲ. ಎಲ್ಲದಕ್ಕೂ ಪಕ್ಷ ದೊಡ್ಡದು ಪಕ್ಷದ ತೀರ್ಮಾನವೇ ಅಂತಿಮ.
ಗಾಲಿ ಸೋಮಶೇಖರರೆಡ್ಡಿ , ನಗರ ಶಾಸಕರು, ಬಳ್ಳಾರಿ.

Leave a Comment