ಕೇರಳಿಗರ ನೆರವಿಗೆ ರಾಹುಲ್ ಮನವಿ

ನವದೆಹಲಿ, ಆ. ೧೬: ಕೇರಳದ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾರ ದೇಣಿಗೆ ನೀಡಬೇಕೆಂದು ಜನರಿಗೆ ಮನವಿ ಮಾಡಿದ್ದಾರೆ.
ಟ್ವೀಟ್ ಮಾಡಿರುವ ರಾಹುಲ್ ಕೇರಳ ಸಿಎಂ ಮಾಡಿಕೊಂಡಿರುವ ಮನವಿಯನ್ನೂ ತಮ್ಮ ಟ್ವೀಟ್‌ಗೆ ಲಿಂಕ್ ಮಾಡಿ ಪೋಸ್ಟ್ ಮಾಡಿದ್ದಾರೆ. ‘ಉದಾರ ನೆರವು ನೀಡಲು ಇದು ಸಕಾಲ’ ಎಂದು ಅವರು ಕೇಳಿಕೊಂಡಿದ್ದಾರೆ.
ಕೇರಳದ ಜನರ ಪರಿಸ್ಥಿತಿ ಕಂಡು ನನಗೆ ತುಂಬಾ ಕಳವಳವಾಗಿದೆ. ಪ್ರವಾಹ ಇನ್ನೂ ಏರುತ್ತಲೇ ಇದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ; ಪರಿಹಾರ ಕೇಂದ್ರಗಳಂತೂ ಭರ್ತಿಯಾಗಿವೆ. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅಂತಹ ದುಸ್ಥಿತಿಯಲ್ಲಿರುವವರಿಗೆ ಉದಾರ ನೆರವು ನೀಡಲು ಇದು ಸಕಾಲ; ದಯವಿಟ್ಟು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾರ ದೇಣಿಗೆ ನೀಡಿ’ ಎಂದು ರಾಹುಲ್ ತಮ್ಮ ಟ್ವೀಟ್ ಖಾತೆಯಲ್ಲಿ ಕೇಳಿಕೊಂಡಿದ್ದಾರೆ.
ಕೇರಳದಲ್ಲಿ ಮುಂಗಾರಿನ ಪ್ರವಾಹ ಪರಿಸ್ಥಿತಿಯಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ ೭೨ಕ್ಕೆ ಏರಿದೆ. ಕುಂಭದ್ರೋಣ ಮಳೆಯಿಂದಾಗಿ ಪರಿಯಾರ್ ನದಿಯ ಪ್ರವಾಹದ ಮಟ್ಟ ಏರಿಕೆಯಾಗಿದೆ. ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳ ಗೇಟುಗಳನ್ನೂ ತೆರೆದಿರುವುದರಿಂದ ತಗ್ಗು ಪ್ರದೇಶದ ಜನ-ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಮತ್ತೊಮ್ಮೆ ಸಂಪರ್ಕಿಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ನಿಬಾಯಿಸುತ್ತಿರುವ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರದಿಂದ ಇನ್ನಷ್ಟು ಸೇನಾಪಡೆ ಹಾಗೂ ಹೆಲಿಕಾಪ್ಟರ್ ಮತ್ತಿತರ ನೆರವು ನೀಡಬೇಕೆಂಬ ಕೋರಿಕೆಗೆ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ. ಬೇಕಾದ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ವಿಜಯನ್ ತಿಳಿಸಿದ್ದಾರೆ.
\

Leave a Comment