ಕೇಬಲ್ ಟಿವಿ ಸಮರ್ಪಕ ಸೇವೆಗೆ ಜಿಲ್ಲಾಧಿಕಾರಿ ಸೂಚನೆ

ಧಾರವಾಡ,ಡಿ.3-ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ಕೇಬಲ್ ಆಪರೇಟರಗಳು  ಟಿವಿ ಚಾನೆಲ್‍ಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಂತಹ ಚಾನೆಲ್‍ಗಳು ಸ್ಥಳೀಯ ಘಟನೆಗಳ ಮಾಹಿತಿಯನ್ನು ಮಾತ್ರ ಸಾರ್ವಜನಿಕರಿಗೆ ನೀಡಬೇಕು. ಅಂತಹ ಚಾನೆಲ್‍ಗಳು ಸುದ್ದಿ ರೂಪದಲ್ಲಿ ಲಾಂಛನ (ಲೋಗೋ) ಬಳಸಿ ಬಿತ್ತರಿಸಬಾರದು. ಅನಧಿಕೃತವಾಗಿ ಯುಟ್ಯೂಬ್ ಸುದ್ದಿ  ಚಾನೆಲ್‍ಗಳು ಕಾರ್ಯನಿರ್ವಹಿಸುವುದು ಕೂಡಾ ಕಾನೂನಿಗೆ ವಿರುದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ  ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿರುವ ದೀಪಾ ಚೋಳನ್ ಹೇಳಿದರು.
ಕೇಬಲ್ ಟೆಲಿವಿಷನ್ ನೆಟವರ್ಕ್ ಅಧಿನಿಯಮ 1995 ಮತ್ತು ಈ ಅಧಿನಿಯಮದಡಿ ರೂಪಿಸಲಾದ ನಿಯಮಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ  ಜಿಲ್ಲಾ ಮಟ್ಟದ  ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಚಾನೆಲ್‍ಗಳು ತಾವು ಪ್ರಸಾರ ಮಾಡಿದ ಕಾರ್ಯಕ್ರಮಗಳು ಮತ್ತು ಸ್ಥಳೀಯ ವರದಿಗಳ ಕುರಿತು ವಿಷಯ ಪಟ್ಟಿಯನ್ನು ತಮ್ಮ ಕಚೇರಿಯಲ್ಲಿ ದಾಖಲಿಸಿ, ಒಂದು ವರ್ಷದವರೆಗೆ ಕಾಯ್ದಿರಿಸಬೇಕು. ಸಮಿತಿ ಬಯಸಿದಾಗ ಹಾಜರು ಪಡಿಸಬೇಕು. ವಿವಿಧ ಟಿವಿ ಚಾನಲ್‍ಗಳು ಮಹಿಳೆ ಮತ್ತು ಮಕ್ಕಳ ಕುರಿತಾಗಿ ಪ್ರಸಾರ ಮಾಡುವ ಯಾವುದೇ ರೀತಿಯ ಕಾರ್ಯಕ್ರಮಗಳಲ್ಲಿ ಮಹಿಳೆ ಮತ್ತು ಮಕ್ಕಳ ಘನತೆ, ವ್ಯಕ್ತಿತ್ವಕ್ಕೆ ಧಕ್ಕೆತರುವಂತಹ ದೃಶ್ಯ,  ಅಂಶಗಳಿದ್ದಲ್ಲಿ ಸಾರ್ವಜನಿಕರು ದೂರು ನೀಡಬಹುದು. ಯುಟ್ಯೂಬ್, ಲೋಕಲ್ ಚಾನಲ್‍ಗಳು ತಮ್ಮದೇ ಆದ ಲೋಗೊ ಬಳಸುವಂತಿಲ್ಲ. ಲೋಕಲ್ ಚಾನಲ್‍ಗಳು ಸ್ಥಳೀಯ ಸುದ್ದಿಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಹೇಳಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವು ಯಾವುದೇ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಾರದು. ಅಂತಹ ವರದಿಗಳು ಯಾವುದೇ ಮಾಧ್ಯಮಗಳಲ್ಲಿ ಪ್ರಸಾರವಾದರೆ ಸಾರ್ವಜನಿಕರು ಜಿಲ್ಲಾ ಮಟ್ಟದ ಕೇಬಲ್ ನಿರ್ವಹಣಾ ಸಮಿತಿಗೆ ದೂರು ಸಲ್ಲಿಸಬಹುದು. ಪೊಲೀಸ್ ಆಯುಕ್ತರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹಾಗೂ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ದೂರುಕೋಶ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ಉಪ ಪೊಲೀಸ್ ಆಯುಕ್ತ ಡಿ.ಎಲ್.ನಾಗೇಶ ಮಾತನಾಡಿ, ಕೇಬಲ್ ಆಪರೇಟರ್‍ಗಳು ಗ್ರಾಹಕರ ಮನೆಗಳಿಗೆ ತೆರಳಿದಾಗ ಸಭ್ಯವಾಗಿ ವರ್ತಿಸಬೇಕು. ಬಿಲ್‍ನಲ್ಲಿ ಗ್ರಾಹಕರ  ಹೆಸರು, ಪ್ರಸಾರ ಮಾಡುವ ಉಚಿತ ಮತ್ತು ಪೇಯ್ಡ್ ಚಾನೆಲ್‍ಗಳ ಮಾಹಿತಿ, ದೂರು ನೀಡಬಹುದಾದ ದೂರವಾಣಿ ಸಂಖ್ಯೆಯ ವಿವರ ಇರಬೇಕು ಎಂದರು.
ಡಿವಾಯ್‍ಎಸ್‍ಪಿ ಗುರು ಮತ್ತೂರ ಮಾತನಾಡಿ, ಜಿಲ್ಲೆಯಲ್ಲಿ ಯುಟ್ಯೂಬ್ ಮತ್ತು ಸ್ಥಳೀಯ ಚಾನೆಲ್‍ಗಳು ಅನಧಿಕೃತವಾಗಿ ತಮ್ಮದೇ ಆದ ಲೋಗೊ ಬಳಸಿ, ಸುದ್ದಿ ಚಾನೆಲ್ ಮಾದರಿಯಲ್ಲಿ ಸುದ್ದಿ, ವರದಿ, ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವುದು ಕಂಡು ಬರುತ್ತಿದೆ ಈ ಕುರಿತು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದರು.

  • ಸಮಿತಿಯ ಸದಸ್ಯರಾದ ಮಕ್ಕಳ ಸಾಹಿತಿ ಡಾ.ಆನಂದ.ವಿ.ಪಾಟೀಲ, ಡಿಮ್ಹಾನ್ಸ್ ಪ್ರಾಧ್ಯಾಪಕ ಡಾ. ರಾಮಪ್ರಸಾದ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಸರಸ್ವತಿ ಕಳಸದ, ಕಲ್ಪತರು ಮಹಿಳಾ ಸಂಘದ ಅಧ್ಯಕ್ಷೆ ಆರತಿ ಪಾಟೀಲ, ಅಂಚೆ ಇಲಾಖೆಯ ಅಧಿಕಾರಿ ಅಕ್ಷತಾ ಮಹಾಲೆ ಅವರು ಮಾತನಾಡಿ ವಿವಿಧ ಸಲಹೆ ಸೂಚನೆ ನೀಡಿದರು.
    ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆ ನಿರ್ವಹಿಸಿದರು. ವಾರ್ತಾ ಸಹಾಯಕ ಸುರೇಶ ಹಿರೇಮಠ, ಸಿಬ್ಬಂದಿ ಸಿ.ಬಿ.ಭೋವಿ ಸಭೆಯಲ್ಲಿದ್ದರು.

Leave a Comment