ಕೇಡಿಗಳಿಗೆ ಗುಂಡು, ಎನ್‌ಕೌಂಟರ್: ನಾಗರಾಜ

ಧಾರವಾಡ, ಫೆ 13- ಹು.ಧಾ. ಅವಳಿ ನಗರದಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಅಗತ್ಯವಿದ್ದರೆ ಗುಂಡು ಹಾರಿಸಲು ಹಿಂಜರಿಯಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇನ್ನು ತೀರಾ ಅವಶ್ಯಕತೆ ಬಿದ್ದರೆ ಎನ್‌ಕೌಂಟರ್‌ಗೆ ಕೂಡ ಆದೇಶಿಸಲಾಗುವುದು ಎಂದು ಹು.ಧಾ. ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಇಂದಿಲ್ಲಿ ಸ್ಪಷ್ಟಪಡಿಸಿದರು.
ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಉಚಿತ ಹೆಲ್ಮೆಟ್ ವಿತರಣಾ ಸಂದರ್ಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಳಿ ನಗರದಲ್ಲಿನ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಅಪರಾಧ ಹಿನ್ನೆಲೆಯುಳ್ಳವರ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಕೆಲವರಿಗೆ ಎಚ್ಚರಿಕೆ ಕೂಡಾ ನೀಡಲಾಗಿದೆ ಎಂದರು.
ಅಪರಾಧವನ್ನು ಮಟ್ಟ ಹಾಕಲು ಗುಂಡು ಹಾರಿಸಲು ಹಿಂಜರಿಯಬೇಡಿ ಎಂದು ಪೊಲೀಸ್ ಆಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲದೆ ಅವಶ್ಯಕತೆ ಬಿದ್ದಲ್ಲಿ ಎನ್‌ಕೌಂಟರ್‌ಗೆ ಕೂಡ ಆದೇಶಿಸಲಾಗುವುದು ಎಂದರು.
ಫೆ. 15 ರಿಂದ ಅವಳಿ ನಗರದಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ನೀತಿ ಜಾರಿಗೆ ಬರಲಿದೆ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಪೆಟ್ರೋಲ್ ಬಂಕ್ ಮಾಲಿಕರೊಂದಿಗೆ ಚರ್ಚಿಸಲಾಗಿದ್ದು, ಹೆಲ್ಮೆಟ್ ಹಾಕಿಕೊಂಡು ಬರದ ಬೈಕ್ ಸವಾರರಿಗೆ ಪೆಟ್ರೋಲ್ ಹಾಕದಿರಲು ಪೆಟ್ರೋಲ್ ಬಂಕ್ ಮಾಲಿಕರು ಒಪ್ಪಿಕೊಂಡಿದ್ದು, ಬಂಕ್‌ಗಳಲ್ಲಿ ಪೊಲೀಸರು ರಕ್ಷಣೆ ಒದಗಿಸಲಿದ್ದಾರೆಂದು ಅವರು ಸ್ಪಷ್ಟಪಡಿಸಿದರು.

Leave a Comment