ಕೇಜ್ರಿ ವಿರುದ್ಧ ಸಿಬಿಐಗೆ ದಾಖಲೆ ನೀಡಿದ ಮಿಶ್ರಾ

ನವದೆಹಲಿ ಮೇ-೧೭ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕಪಿಲ್ ಮಿಶ್ರಾ, ಸಿಬಿಐ ಅಧಿಕಾರಿಗೆ ನೀಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಆರೋಪಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಸತ್ಯ ಹೊರ ಬರುತ್ತದೆ, ಆರೋಪಗಳನ್ನು ಪುಷ್ಟೀಕರಿಸುವಂತಹ ಎಲ್ಲ ದಾಖಲೆಗಳನ್ನು ಸಿಬಿಐಗೆ ನೀಡಿದ್ದೇನೆ ಎಂದು ಸಿಬಿಐ ಕಚೇರಿಯಿಂದ ಹೊರಬಂದ ಕಪಿಲ್ ಮಿಶ್ರಾ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ವಿರುದ್ಧ ಪಕ್ಷದ ದೇಣಿಗೆ, ಅವ್ಯವಹಾರ, ಕಪ್ಪು ಹಣ, ನಕಲಿ ಕಂಪನಿಗಳಲ್ಲಿ ಅಕ್ರಮ ಹಣ ಲೇವಾದೇವಿ ಇತ್ಯಾದಿ ಗಂಭೀರ ಆರೋಪಗಳನ್ನು ಮಾಡಿದ್ದ ಕಪಿಲ್ ಮಿಶ್ರಾ ನಿನ್ನೆ ಎಲ್ಲಾ ದಾಖಲೆಗಳನ್ನು ಸಿಬಿಐಗೆ ಒದಗಿಸಿರುವುದರಿಂದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ಗೆ ತೀವ್ರ ಸಂಕಷ್ಟ ಎದುರಾಗಿದೆ.

ನಿನ್ನೆ ಸಿಬಿಐ ಕಚೇರಿಗೆ ಭೇಟಿ ಮಾಡಿ ದಾಖಲೆ ನೀಡಿರುವ ಕಪಿಲ್ ಮಿಶ್ರಾ ಇಂದು ಕೇಂದ್ರ ನೇರ ತೆರಿಗೆ ಮಂಡಳಿಗೆ (ಸಿಬಿಡಿಟಿ) ಭೇಟಿ ನೀಡಿ ಕೇಜ್ರಿವಾಲ್ ರವರು ನಕಲಿ ಕಂಪನಿಗಳೊಂದಿಗೆ ನಡೆಸಿರುವ ಅಕ್ರಮ ವಹಿವಾಟು ಕುರಿತ ದಾಖಲೆಗಳನ್ನು ನೀಡಲಿದ್ದಾರೆ.

ಆಮ್ ಆದ್ಮಿ ಪಕ್ಷದಿಂದ ವಜಾಗೊಂಡ ಕಪಿಲ್ ಮಿಶ್ರಾ ಮೇ-೯ ರಂದು ಕೇಜ್ರಿವಾಲ್ ವಿರುದ್ಧ ಮೇಲಿನ ೩ ಆರೋಪಗಳನ್ನು ಸಿಬಿಐನಲ್ಲಿ ದಾಖಲಿಸಿದ್ದರು. ಕೇಜ್ರಿವಾಲ್ ಮತ್ತು ಸತ್ಯೇಂದ್ರ ಜೈನ್ ನಡುವೆ ೨ ಕೋಟಿ ರೂ. ಗಳ ವ್ಯವಹಾರದ ಆರೋಪವೂ ಇದರಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.

Leave a Comment