ಕೇಕ್ ಹಾರ ತುರಾಯಿ ಬಿಟ್ಟು – ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್

ಬೆಂಗಳೂರು,ಫೆ.16-ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾವಿರಾರು ಅಭಿಮಾನಿಗಳು ಹಿತೈಷಿಗಳ ಸಂತಸ ಸಂಭ್ರಮದ ನಡುವೆ ನಿನ್ನೆ ಮಧ್ಯರಾತ್ರಿ ಹುಟ್ಟುಹಬ್ಬ ಆಚರಿಸಿಕೊಂಡರು. ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ತಮ್ಮ ೪೩ನೇ ಹುಟ್ಟು ಹಬ್ಬವನ್ನು ಡಿ ದಾಸ್ ಖ್ಯಾತಿಯ ದರ್ಶನ್ ಆಚರಿಸಿಕೊಂಡಿದ್ದು ಅಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು
ರಾತ್ರಿಯೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಅಭಿಮಾನಿಗಳು ರಾಜರಾಜೇಶ್ವರಿನಗರದ ಮನೆ ಮುಂದೆ ಸೇರಿದ್ದು ದರ್ಶನ್ ಸರಿಯಾಗಿ ೧೨ ಗಂಟೆಗೆ ಹೊರಬಂದು ಅವರತ್ತ ಕೈ ಬೀಸಿದರು. ಯಾವುದೇ ಕೇಕ್, ಹಾರ ತುರಾಯಿಗಳನ್ನ ತರುವ ಬದಲು ದವಸ ಧಾನ್ಯಗಳನ್ನ ನೀಡಿ ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಈ ಹಿಂದೆಯೇ ಕರೆ ನೀಡಿದ್ದರು.

darshan-birthday-_115
ಅದರಂತೆ ಅಭಿಮಾನಿಗಳು ದಾಸನ ಹುಟ್ಟು ಹಬ್ಬಕ್ಕೆ ದವಸ ಧಾನ್ಯ ನೀಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ದರ್ಶನ್ ಪುತ್ರ, ಸ್ಯಾಂಡಲ್‌ವುಡ್ ನಟರು, ಆಪ್ತರಾದ ಆದಿತ್ಯ, ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್ ಸೇರಿದಂತೆ ಅನೇಕ ನಟರು ದರ್ಶನ್‌ಗೆ ಶುಭಾಶಯ ಕೋರಿದರು.
ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಿಲೋ ಮೀಟರ್ ಗಟ್ಟಲೇ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. ಯಾರೊಬ್ಬರಿಗೂ ನಿರಾಸೆ ಮಾಡದ ದರ್ಶನ್ ಸರಿ ಸಾಲಿನಲ್ಲಿ ಬಂದ ಎಲ್ಲಾ ಅಭಿಮಾನಿಗಳಿಗೆ ಶೆಕ್ ಹ್ಯಾಂಡ್ ಕೊಟ್ಟು ಖುಷಿ ಪಡಿಸಿದರು. ಆದರೆ ಸೆಲ್ಫಿ ತೆಗೆದುಕೊಳ್ಳಲು ಮಾತ್ರ ನಿರಾಕರಿಸಿದರು.

darshan-birthday-_117
ಮೊಬೈಲ್ ಬಳಕೆ ನಿಷೇಧಿಸಲಾಗಿತ್ತಾದರೂ ಮೊಬೈಲ್ ಹಿಡಿದು ಫೋಟೋ ಕ್ಲಿಕ್ಕಿಸಲು ಯತ್ನಿಸಿದ ಕೆಲವು ಅಭಿಮಾನಿಗಳಿಗೆ ಡಿಬಾಸ್ ಟೀಮ್ ಅವಕಾಶ ಕೊಡಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಉಂಟಾದ ನೂಕು ನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಮಹಿಳೆಯರು, ಹೆಣ್ಣು ಮಕ್ಕಳು, ಅಂಗವಿಕಲ ಅಭಿಮಾನಿಗಳು ಕೂಡ ದರ್ಶನ್‌ಗೆ ಹುಬ್ಬಹಬ್ಬಕ್ಕೆ ಶುಭಕೋರಿ ಹರಸಿದರು.

ರಾಬರ್ಟ್ ಟೀಸರ್
ಇದೇ ವೇಳೆ ಬಹುನಿರೀಕ್ಷಿತ ‘ರಾಬರ್ಟ್’ ಟೀಸರ್ ಬಿಡುಗಡೆಯಾಗಿದ್ದು ಅದರಲ್ಲಿ ತಾಳ್ಮೆ, ಪ್ರೀತಿಯಿಂದ ಬಂದರೆ ರಾಮ, ಅದೇ ತಿರುಗಿ ಬಿದ್ದರೆ ಲಂಕಾಧಿಪತಿ ದಶಕಂಠ ರಾವಣ ಎಂದು ರಾಬರ್ಟ್ ಅವತಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಘರ್ಜಿಸಿದ್ದಾರೆ.
ಇಷ್ಟು ದಿನ ಪೋಸ್ಟರ್ ಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದ ಚಿತ್ರತಂಡ, ಮೊದಲ ಬಾರಿಗೆ ಸಿನಿಮಾದ ದೃಶ್ಯವನ್ನು ಹಂಚಿಕೊಂಡಿದೆ. ಟೀಸರ್ ನಲ್ಲಿ ಎರಡ್ಮೂರು ಲುಕ್‌ಗಳು ಬಂದು ಹೋಗುತ್ತದೆ. ಅದರಲ್ಲೂ ಆಕ್ಷನ್ ದೃಶ್ಯಗಳಂತೂ ಅಭಿಮಾನಿಗಳ ಗಮನ ಸೆಳೆದಿದೆ. ರಾಬರ್ಟ್ ಇಲ್ಲಿ ರಾಮನೂ ಆಗಿದ್ದಾರೆ, ರಾಮಣನೂ ಆಗಿದ್ದಾರೆ.

darshan-01

ಕೇವಲ ೧.೧೧ ನಿಮಿಷ ಇರುವ ಟೀಸರ್‌ನಲ್ಲಿ ದರ್ಶನ್ ಹೇಳುವ ಒಂದೇ ಡೈಲಾಗ್ ಚಿತ್ರದ ಹೈಲೈಟ್. ಹೌದು. ಅವನು ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ಟ್ರೆ ದಶರಥ ರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ ಎಂದು ರಾಬರ್ಟ್‌ನನ್ನು ವರ್ಣಿಸುವ ಡೈಲಾಗ್‌ನೊಂದಿಗೆ ಟೀಸರ್ ಆರಂಭವಾಗಲಿದೆ.
ಜಗಪತಿ ಬಾಬು ವಿಲನ್
ಬಳಿಕ ದರ್ಶನ್ ಬೈಕ್ ಏರಿಬಂದು, ಫೈಟ್ ಮಾಡುವ ಆಕ್ಷನ್ ದೃಶ್ಯದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂದು ಮೂರು ಪಾತ್ರದಲ್ಲಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನಲೆ ಸಂಗೀತ ನೀಡಿದ್ದಾರೆ.

Leave a Comment