ಕೇಂದ್ರ ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ

ಮೈಸೂರು, ಸೆ.14- ಪ್ರತಿ ವರ್ಷದಂತೆ ಈ ವರ್ಷವೂ ಸೆ.14ರಂದು ಹಿಂದಿ ದಿವಸ್ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಕೇಂದ್ರ ಸರ್ಕಾರದಡಿಯಲ್ಲಿ ಕಾರ್ಯನಿರ್ವಹಿಸುವ ಇಲಾಖೆಗಳಲ್ಲಿ ಹಿಂದಿ ಭಾಷೆಯಲ್ಲಿ ಕೆಲ ಸ್ಪರ್ಧೆಯನ್ನಿಟ್ಟು ಹಿಂದಿ ಭಾಷೆಯನ್ನು ಪರೋಕ್ಷವಾಗಿ ಹೇರಲು ಹೊರಟ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ಮೈಸೂರು ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿಯಿಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಸರ್ಕಾರಿ ಕಚೇರಿಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕೈಬಿಟ್ಟು ಹಿಂದಿ, ಇಂಗ್ಲೀಷಿಗೆ, ಕನ್ನಡ ಬಾರದ ಕನ್ನಡೇತರರಿಗೆ ಮಣೆ ಹಾಕಲಾಗುತ್ತಿದೆ. ಕನ್ನಡಿಗರನ್ನು ಕರ್ನಾಟಕದಲ್ಲೇ ಎರಡನೇ ದರ್ಜೆಯ ಪ್ರಜೆಗಳಂತೆ ಕಾಣಲಾಗುತ್ತಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಕನ್ನಡಿಗರಿಗಾಗುತ್ತಿದ್ದ ಅನ್ಯಾಯ ಖಂಡಿಸಿ ನಡೆಸಿದ ಪ್ರತಿಭಟನೆಯಿಂದ ರೈಲ್ವೆ ಪರೀಕ್ಷೆಗಳು ಕನ್ನಡದಲ್ಲೂ ಆರಂಭವಾಗಿವೆ. ಕರ್ನಾಟಕದ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಹಿಂದಿಯನ್ನು ಹೇರುವ ಕನ್ನಡ ಮತ್ತು ಕನ್ನಡಿಗರನ್ನು ಕಡೆಗಣಿಸುವ ಕಾರ್ಯ ಮುಂದುವರಿದಿದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಎಲ್ಲ ಭಾಷೆಗಳಿಗೂ ಕೇಂದ್ರದ ಅಧಿಕೃತ ಸ್ಥಾನಮಾನ ಸಿಗುವಂತೆ ಭಾಷಾ ನೀತಿಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ರಘು, ಕಿಶೋರ್ ಕುಮಾರ್, ರಾಚಪ್ಪ, ಹೇಮಂತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Comment