ಕೇಂದ್ರ ಬಜೆಟ್ ಹಿನ್ನೆಲೆ; ಹಣಕಾಸು ಸಚಿವಾಲಯದಿಂದ ‘ಹಲ್ವಾ ‘ ಸಮಾರಂಭ

ನವದೆಹಲಿ, ಜ 20 -ಸಂಸತ್ತಿನಲ್ಲಿ 2020-21 ನೇ ವಾರ್ಷಿಕ ಆಯವ್ಯಯ ಮಂಡನೆಗೆ 11 ದಿನಗಳಿರುವ ಹಿನ್ನೆಲೆಯಲ್ಲಿ ಸೋಮವಾರ ಕೇಂದ್ರ ಹಣಕಾಸು ಸಚಿವಾಲಯದ ಉತ್ತರ ಬ್ಲಾಕ್ ಪ್ರಧಾನ ಕಾರ್ಯಾಲಯದಲ್ಲಿ ‘ಹಲ್ವಾ’ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಬಜೆಟ್ ಗೆ ಸಂಬಂಧಿಸಿದ ದಾಖಲೆಗಳನ್ನು ಮುದ್ರಿಸುವ ಕೆಲಸದ ಆರಂಭವನ್ನು ಸೂಚಿಸುವ ಈ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತಿ ವರ್ಷ ಸರ್ಕಾರ ಈ ‘ಹಲ್ವಾ’ ಸಮಾರಂಭ ಹಮ್ಮಿಕೊಳ್ಳುತ್ತದೆ. ಇದರಲ್ಲಿ ಒಂದು ದೊಡ್ಡ ಪಾತ್ರೆಯಲ್ಲಿ ಹಲ್ವಾ ತಯಾರಿಸಿ, ಬಜೆಟ್ ತಯಾರಿಕೆಯಲ್ಲಿ ನೇರವಾಗಿ ಭಾಗಿಯಾಗಿರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಿತರಿಸಲಾಗುತ್ತದೆ. ಹಣಕಾಸು ಸಚಿವರು ಇದರ ಅಧ್ಯಕ್ಷತೆ ವಹಿಸುತ್ತಾರೆ.

ಇದರ ನಂತರ ಅಧಿಕಾರಿಗಳು ದಾಖಲೆಗಳ ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವರೆಗೂ ಗೌಪ್ಯತೆ ಕಾಪಾಡಲಾಗುತ್ತದೆ ಮತ್ತು ಅಧಿಕಾರಿಗಳು ಈ ಸಮಯದಲ್ಲಿ ಹೊರ ಜಗತ್ತಿನೊಂದಿಗೆ ಯಾವುದೇ ಸಂಪರ್ಕ ಹೊಂದಿರುವುದಿಲ್ಲ.

ಈ ಕುರಿತು ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ, ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಹಲ್ವಾ ಸಮಾರಂಭ ನಡೆಯಿತು ಎಂದು ಮಾಹಿತಿ ನೀಡಿದೆ.

ಇದು ನಿರ್ಮಲಾ ಸೀತಾರಾಮನ್ ಅವರ ಎರಡನೇ ಬಜೆಟ್ ಮಂಡನೆಯಾಗಿದೆ. ಫೆ. 1ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆಯಾಗಲಿದೆ.

ಜ. 31ರಿಂದ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಆ ದಿನ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ಸಂಸತ್ತಿನಲ್ಲಿ ಆರ್ಥಿಕ ಸರ್ವೆ ವರದಿ ಮಂಡಿಸುವ  ಸಾಧ್ಯತೆಯಿದೆ.

Leave a Comment