ಕೇಂದ್ರ ಆರ್ಥಿಕ ನೀತಿಯಿಂದ ಜನ ಸಾಮಾನ್ಯರು ಬೀದಿಪಾಲು

ಶಿಡ್ಲಘಟ್ಟ, ಜ.೯- ದೇಶದಲ್ಲಿ ೧೯೯೧ ರಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ನೀತಿಗಳನ್ನು ಕೇಂದ್ರ ಸರ್ಕಾರ ವೇಗವಾಗಿ ಜಾರಿ ಮಾಡುತ್ತಿದ್ದು, ಇದರ ಪರಿಣಾಮವಾಗಿ ದೇಶಕ್ಕೆ ಅನ್ನ ಕೊಡುವ ರೈತರು, ಸಂಪತ್ತನ್ನು  ಸೃಷ್ಟಿಸುವ ಕಾರ್ಮಿಕರು, ಸೇವೆಯನ್ನು ಮಾಡುವ ನೌಕರರು, ಕೂಲಿಯನ್ನು ನಂಬಿ ಬದುಕುತ್ತಿರುವ ಬಡಜನರು ಬೀದಿಪಾಲಾಗುತ್ತಿದ್ದಾರೆ ಎಂದು ಸಿ.ಐ.ಟಿ.ಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಆರೋಪಿಸಿದರು.

ದೇಶದ ಕಾರ್ಮಿಕರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಅಂಗವಾಗಿ ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಹಲವು ಬಡವರು, ಮದ್ಯಮ ವರ್ಗದವರು, ಅಸಂಘಟಿತ ವಲಯದ ಕಾರ್ಮಿಕ ವಿರೋಧಿ ನೀತಿಗಳು ದೇಶವನ್ನು ದಿವಾಳಿಯಾಗುವತ್ತ ಕೊಂಡೊಯ್ಯುತ್ತಿವೆ. ದೇಶದಲ್ಲಿ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದರು ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಬೆಲೆ ಜಾಸ್ತಿಯಿದೆ. ಅದನ್ನು ಇಳಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೂರುದರು.

 9sdl1-1

ನೋಟು ಅಮಾನೀಕರಣ ಹಾಗೂ ಜಿ.ಎಸ್.ಟಿ.ಯಿಂದಾಗಿ ಬಡವರು, ಮದ್ಯಮ ವರ್ಗದವರು ಹೆಚ್ಚು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಗಳನ್ನು ನಿಗದಿಪಡಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.

ಗ್ರಾಮ ಪಂಚಾಯಿತಿ ನೌಕರರ ಕಾರ್ಯದರ್ಶಿ ಕೆ.ಎಂ. ಪಾಪಣ್ಣ ಮಾತನಾಡಿ, ಕೇಂದ್ರ ಸರ್ಕಾರ, ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣ ಮಾಡಬೇಕು. ಹೊಸ ಉದ್ಯೋಗಗಳನ್ನು ಸೃಷ್ಠಿ ಮಾಡಬೇಕು, ಕೇಂದ್ರ ಸರ್ಕಾರದ ವೇತನ ಆಯೋಗವು ಕಾರ್ಮಿಕರಿಗೆ ಕನಿಷ್ಠ ೧೮ ಸಾವಿರ ವೇತನ ನಿಗದಿ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ೨ ವರ್ಷಗಳಾದರೂ ದೇಶದಲ್ಲಿ ಕಾನೂನಾಗಿ ಪರಿವರ್ತನೆ ಮಾಡಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿನ ಕೂಲಿ ಕಾರ್ಮಿಕರ ಕೂಲಿ ಕೇವಲ ೮ ಸಾವಿರಕ್ಕೆ ಇಳಿದಿದೆ. ಕಾರ್ಮಿಕ ಕಾನೂನುಗಳ ತಿದ್ದುಪಡಿ ನಿಲ್ಲಿಸಬೇಕು. ಗುತ್ತಿಗೆ ಆಧಾರಿತ ನೌಕರರನ್ನು ಖಾಯಂ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು. ದೇಶದ ಎಲ್ಲಾ ಕಾರ್ಮಿಕರಿಗೂ ಸಾರ್ವತ್ರಿಕ ಸಾಮಾಜಿಕ ರಕ್ಷಣೆ ಕೊಡಬೇಕು. ಕೃಷಿ ಬಿಕ್ಕಟ್ಟಿನಿಂದ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಯಲು ಸೂಕ್ತ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ನಗರದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟದ ನೌಕರರು, ರೈತ ಮುಖಂಡರು ಬಂದ್ ಗೆ ಬೆಂಬಲ ನೀಡಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೆಲವು ಅಂಗಡಿಗಳ ವ್ಯಾಪಾರಸ್ಥರು ಎಂದಿನಂತೆ ಅಂಗಡಿಗಳ ಬಾಗಿಲುಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದರು. ಪ್ರತಿಭಟನಾಕಾರರು ಅಂಗಡಿಗಳನ್ನು ಮುಚ್ಚಿಸಿದರು.

ಅಲ್ಲಲ್ಲಿ ಪ್ರತಿಭಟನಾಕಾರರು ಹಾಗೂ ನಾಗರಿಕರ ನಡುವೆ ಮಾತಿನ ಚಕಮಕಿ ನಡೆದವು. ಸಿನಿಮಾಮಂದಿರಗಳು, ಶಾಲಾ ಕಾಲೇಜುಗಳು, ಬಂದ್ ಆಗಿದ್ದವು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಗುಲ್ಜಾರ್, ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಶಂಕರಪ್ಪ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವಥಮ್ಮ, ಸಿ.ಐ.ಟಿ.ಯು ಸಂಯೋಜಕ ಫಯಾಜ್, ಸಿ.ಐ.ಟಿ.ಯು.ನೌಕರರ ಕಾರ್ಯದರ್ಶಿ ಗೀತಾ ಹಾಗೂ ಮತ್ತಿತರರು ಇದ್ದರು.

Leave a Comment