ಕೇಂದ್ರದ ವಿರುದ್ಧ ತಿರುಗಿಬಿದ್ದ ಅಲೋಕ್

ನವದೆಹಲಿ, ಜ. ೧೧- ಸುಪ್ರೀಂ ಕೋರ್ಟ್‌ನಿಂದ ಮರುನೇಮಕಗೊಂಡ ಒಂದೇ ದಿನದಲ್ಲಿ ಸಿಬಿಐ ನಿರ್ದೇಶಕ ಸ್ಥಾನದಿಂದ ಎತ್ತಂಗಡಿ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಅಲೋಕ್ ವರ್ಮ ತಿರುಗಿಬಿದ್ದಿದ್ದಾರೆ.

ದುರುದ್ದೇಶದ ನಿರ್ಧಾರ

ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರನ್ನು ಎತ್ತಂಗಡಿ ಮಾಡಿರುವುದು ದುರುದ್ದೇಶ ಪೂರ್ವಕವಾಗಿದೆ. ಅವರ ವಿರುದ್ಧ ಕೇಳಿಬಂದಿರುವ 10 ಆರೋಪಗಳ ಪೈಕಿ 6 ಆರೋಪಗಳಿಗೆ ಆಧಾರಗಳೇ ಇಲ್ಲ. ಇನ್ನು 4 ಆರೋಪಗಳ ಬಗ್ಗೆ ತನಿಖೆ ನಡೆಯಬೇಕು. ಹೀಗಿದ್ದರೂ ಅವರನ್ನು ವಿಚಾರಣೆಗೆ ಒಳಪಡಿಸದೆ ಎತ್ತಂಗಡಿ ಮಾಡಿರುವ ಕ್ರಮ ಸರಿಯಲ್ಲವೆಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾ ಮಾಡಿ ಗೃಹ ರಕ್ಷಕ ದಳಕ್ಕೆ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ತಮ್ಮ ವಿರುದ್ಧ ಸುಳ್ಳು, ಸಾಬೀತಾಗದ ಹಾಗೂ ಕ್ಷುಲ್ಲಕ ಆರೋಪ ಮಾಡಲಾಗಿದೆ ಎನ್ನುವ ಮೂಲಕ ಮೌನ ಮುರಿದು ಸಿಬಿಐನ ಘನತೆ, ಗೌರವವನ್ನು ಮಣ್ಣುಪಾಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸಿಬಿಐ ನಿರ್ದೇಶಕ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಿದ್ದೇನೆ. ಸಂಸ್ಥೆಯ ಘನತೆ, ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದೇನೆ. ಹೀಗಾಗಿ ತಮ್ಮನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡುವ ಮೂಲಕ ಸಂಸ್ಥೆಯ ಗೌರವವನ್ನು ಹಾಳುಮಾಡಲಾಗಿದೆ ಎಂದು ದೂರಿದ್ದಾರೆ.

ಸಿಬಿಐ ಸಂಸ್ಥೆ ದೇಶದಲ್ಲಿ ಅತ್ಯುನ್ನತ ತನಿಖಾ ಸಂಸ್ಥೆಯಾಗಿದ್ದು, ಅದು ಸ್ವತಂತ್ರವಾಗಿ ಕೆಲಸ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.

ಸಿಬಿಐನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಿ ಅಲೋಕ್ ವರ್ಮ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

77 ದಿನಗಳ ರಜೆಯ ಬಳಿಕ ಸುಪ್ರೀಂ ಕೋರ್ಟ್ ಮೊನ್ನೆಯಷ್ಟೇ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಅಲೋಕ್ ವರ್ಮ ಅವರನ್ನು ಮರುನೇಮಕ ಮಾಡಿತ್ತು. ಇದರ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಮಿತಿ ಸಿಬಿಐ ನಿರ್ದೇಶಕ ಸ್ಥಾನದಿಂದ ಪದಚ್ಯುತಗೊಳಿಸಿದೆ.

Leave a Comment