ಕೇಂದ್ರದ ನೆರವು ಅಶೋಕ್ ವಿಶ್ವಾಸ

ನವದೆಹಲಿ, ಆ. ೧೬- ರಾಜ್ಯದ ಪ್ರವಾಹ ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ರೂ.ಗಳ ನೆರವು ಕೋರಲಾಗಿದೆ. ವಿಶೇಷ ಪ್ಯಾಕೇಜ್‌ನ್ನು ಕೇಂದ್ರ ಸರ್ಕಾರ ನೀಡುವ ಭರವಸೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು.
ರಾಜ್ಯದ ಪ್ರವಾಹ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ನೆರವು ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ರವರ ಜತೆ ಪ್ರದಾನಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಕ್ಷಣಕ್ಕೆ 10 ಸಾವಿರ ಕೋಟಿ ರೂ.ಗಳನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದರು.
ಪ್ರವಾಹ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ಅವರಿಗೆ ತಿಳಿಸಿದ್ದೇವೆ. ಐದು ಲಕ್ಷ ರೂ.ಗಳಲ್ಲಿ ಮನೆ ನಿರ್ಮಾಣ ಸಾಧ್ಯವೆ ಎಂಬ ಪ್ರಶ್ನೆಯನ್ನು ಪ್ರಧಾನಿಗಳು ಪ್ರಸ್ತಾಪಿಸಿದರು. ರಾಜ್ಯ ಕೈಗೊಂಡಿರುವ ಪರಿಹಾರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.
ಕೇಂದ್ರದಿಂದ ಆದಷ್ಟು ಶೀಘ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ. ಪೂರ್ಣ ಪ್ರಮಾಣದ ವರದಿ ಬಂದ ನಂತರ ಸೂಕ್ತ ಪರಿಹಾರ ದೊರಕುವ ವಿಶ್ವಾಸವೂ ಇದೆ ಎಂದು ಅವರು ಹೇಳಿದರು.
ನಾಳೆ ಅಮಿತ್ ಶಾ ಜತೆ ಚರ್ಚೆ
ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ನಾಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರ ಜತೆ ಚರ್ಚೆ ನಡೆಸಲಿದ್ದಾರೆ. ಸಂಪುಟಕ್ಕೆ ಯಾರು ಸೇರ್ಪಡೆಯಾಗಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಅವರು ಹೇಳಿದರು.

Leave a Comment