ಕೇಂದ್ರದ ನೀತಿ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೧೦- ಪೆಟ್ರೋಲ್-ಡೀಸಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಬಂದ್ ಬೆಂಬಲಿಸಿ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನಾ ಪ್ರದರ್ಶನ ನಡೆಸುವ ಮೂಲಕ ತೈಲ ಬೆಲೆ ಇಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದರು.
ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪೆಟ್ರೋಲ್-ಡೀಸಲ್, ಅಡುಗೆ ಅನಿಲ ದರವನ್ನು ಇಳಿಸುವಂತೆ ನಡೆಸಿದ ಪ್ರತಿಭಟನೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಟೌನ್‌ಹಾಲ್ ಮುಂಭಾಗ ಗ್ಯಾಸ್ ಸಿಲಿಂಡರ್‌ಗಳನ್ನು ಪ್ರದರ್ಶಿಸಿ ಅಡುಗೆ ಅನಿಲ ಏರಿಕೆಯಿಂದ ಜನರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ವಕ್ತಾರ ಶರವಣ ಅವರು ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ `ಹಚ್ಚೇ ದಿನ್ ಆಯೇಗಾ’ ಎಂದು ಹೇಳುತ್ತಲೆ ಬಂದಿದ್ದಾರೆ.
ಪೆಟ್ರೋಲ್-ಡೀಸಲ್, ಅಡುಗೆ ಅನಿಲ ದರ ಗಗನಕ್ಕೇರಿರುವುದು `ಒಳ್ಳೆಯ ದಿನ’ಗಳೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಮ ವರ್ಗದವರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆಗಳು ಇಳಿಕೆಯಾಗದಿದ್ದರೆ ಜನರ ಬದುಕು ದುಸ್ಥರವಾಗಲಿದೆ ಎಂದು ಹೇಳಿದರು.
ಬೆಂಗಳೂರು ಮಹಾನಗರ ಜಾತ್ಯಾತೀಯ ಜನತಾದಳದ ಅಧ್ಯಕ್ಷ ಆರ್. ಅಶೋಕ್ ಅವರು ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಮನಸ್ಸೋ ಇಚ್ಛೆ ಅಗತ್ಯ ವಸ್ತುಗಳ ಬೆಲೆ ಏರಿಸಿ ದೇಶದ ಜನರ ಬಾಳನ್ನು ನರಕಸದೃಶ್ಯವನ್ನಾಗಿ ಮಾಡಿದೆ.
ಕೂಡಲೇ ಪೆಟ್ರೋಲ್-ಡೀಸಲ್ ಮತ್ತು ಅಡುಗೆ ಅನಿಲ ದರವನ್ನು ಇಳಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ದೂರದೃಷ್ಠಿಯಿಲ್ಲದ ಆಡಳಿತ, ಸತತ ವಿದೇಶ ಪ್ರವಾಸ ಹಾಗೂ ಮಾತಿನಲ್ಲೇ ಮನೆ ಕಟ್ಟುವ ಮೂಲಕ ಪ್ರಧಾನಿ ನರೇಂದ್ರಮೋದಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಬಿಎಂಪಿಯ ಜೆಡಿಎಸ್ ಗುಂಪಿನ ನಾಯಕಿ ನೇತ್ರಾನಾರಾಯಣ್ ಅವರು ಕೇಂದ್ರ ಸರ್ಕಾರವು ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ್ದಾರೆ ಎಂದು ಆರೋಪಿಸಿದರು.

Leave a Comment