ಕೇಂದ್ರದ ಕಾಮಗಾರಿಗಳಿಗೆ ರಾಜ್ಯದ ದಿವ್ಯ ನಿರ್ಲಕ್ಷ್ಯ-ಶೆ

ಟ್ಟರ್
ಹುಬ್ಬಳ್ಳಿ,ಜ13- ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಕೇಂದ್ರದ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಇಂದಿಲ್ಲಿ ಆಪಾದಿಸಿದರು.
ನಗರದಲ್ಲಿ ನಡೆಯತ್ತಿರುವ ಪಿರಾಮಿಡ್ ಧ್ಯಾನ ಕೇಂದ್ರದ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಸೇರಿದಂತೆ ರಾಜ್ಯದಲ್ಲಿ ಕೇಂದ್ರದ ಅನುದಾನದದಡಿ ನಡೆಯುತ್ತಿರುವ ಯಾವ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನಿರ್ಲಕ್ಷ್ಯವೇ ಕಾರಣವೆಂದರು.
ಹು.ಧಾ.ಅವಳಿನಗರದ ಮಧ್ಯೆ ನಡೆಯುತ್ತಿರುವ ಬಿಆರ್‌ಟಿಎಸ್ ಕಾಮಗಾರಿ ಕೂಡಾ ಕುಂಟುತ್ತಾ ಸಾಗಿದೆ. ಜನೇವರಿ ಅಂತ್ಯದವೇಳೆಗೆ ಈ ಕಾಮಗಾರಿಯನ್ನು ಮುಗಿಸಬೇಕೆಂದು ಹಠ ಹಿಡಿದಿದ್ದೇನೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ನೃಪತುಂಗ ಬೆಟ್ಟ, ಉಣಕಲ್, ತೋಳನ ಕೆರೆಗಳನ್ನು ಸೇರಿಸಿ ಅಭಿವೃದ್ಧಿಪಡಿಸಬೇಕೆಂದು ಅವರು ಒತ್ತಾಯಿಸಿದರು.
ಕೇಂದ್ರದ ಅನುದಾನದಡಿ ಹು.ಧಾ.ಅವಳಿನಗರ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಇನ್ನು ಹು.ಧಾ.ಅವಳಿನಗರದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಕೇವಲ ಅಹಂಕಾರದ ಮಾತುಗಳನ್ನಾಡುತ್ತಾ ಅವರು ಓಡಾಡಿದರೆ ಅಭಿವೃದ್ಧಿ ಸಾಧ್ಯವೇ? ಎಂದು ಶೆಟ್ಟರ್ ಪ್ರಶ್ನಿಸಿದರು.
ಜನೇವರಿ 16 ರಂದು ಪಿರಾಮಿಡ್ ಧ್ಯಾನ ಕೇಂದ್ರದ ಉದ್ಘಾಟನೆ ಆಗಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮೇಯರ್ ಡಿ.ಕೆ.ಚವ್ಹಾಣ, ಮಾಜಿ ಮೇಯರ್ ವೀರಣ್ಣ ಸವಡಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Leave a Comment