ಕೇಂದ್ರದಿಂದ ರಾಜ್ಯದ ತೆರಿಗೆ ಪಾಲು ಕಡಿತ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಫೆ.20 -ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನೀಡಬೇಕಾಗಿರುವ ತೆರಿಗೆ ಪಾಲನ್ನು ಕಡಿಮೆಯಾಗುತ್ತಿದ್ದು, 2019-20ನೇ ಸಾಲಿನಲ್ಲಿ 17 ಸಾವಿರ ಕೋಟಿ ರೂ. ಕೊರತೆಯಾಗಲಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ. ಇದರ ವಿರುದ್ಧ ರಾಜಕೀಯ ಹೋರಾಟ ಮಾಡಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಹೇಳಿದ್ದಾರೆ.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾಹ ಬಂದಾಗ ಕೇಂದ್ರ ಸರ್ಕಾರದಿಂದ ಒಟ್ಟು 1869 ಕೋಟಿ ರೂ.ಮಂಜೂರಾಗಿತ್ತು.  ಆದರೆ ಇದುವರೆಗೆ 1652 ಕೋಟಿ ರೂ.ಮಾತ್ರ ಬಿಡುಗಡೆಯಾಗಿದೆ. ಇಷ್ಟು ಪರಿಹಾರ ಸಾಕಾ ?  ಇದರಲ್ಲೇ ನೀವು ಸಂತೋಷವಾಗಿದ್ದೀರಾ . 25 ಮಂದಿ ಬಿಜೆಪಿ ಸಂಸದರನ್ನು ರಾಜ್ಯದ ಜನ  ಗೆಲ್ಲಿಸಿದ್ದಾರೆ. ಒಂದು ದಿನವಾದರೂ ಕೂಡ ಈ ಎಲ್ಲಾ ಬಿಜೆಪಿ 25 ಸಂಸದರು ಒಟ್ಟಾಗಿ  ಪ್ರಧಾನಿಯವರನ್ನು ಭೇಟಿಯಾಗಿ ಪರಿಹಾರಕ್ಕೆ ಒತ್ತಾಯಿಸಿದ್ದೀರಾ ? ಇದು ರಾಜ್ಯಕ್ಕೆ  ಅನ್ಯಾಯವಲ್ಲವೇ? ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ಇಡೀ  ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಕ್ರಮವಾಗಿ ಮೊದಲ  ಮೂರು ಸ್ಥಾನಗಳಲ್ಲಿದೆ. ಆದರೂ ನಮ್ಮ ಪಾಲು ಕೊಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ.  ಇದನ್ನು ನಾನು ವಿರೋಧ ಪಕ್ಷದ ನಾಯಕನಾಗಿ ಹೇಳುತ್ತಿಲ್ಲ. ನಮಗೆ ಕೊಟ್ಟಿರುವ ಪಾಲು ಬಹಳ  ಕಡಿಮೆ. ಇದರ ಬಗ್ಗೆ  ಬಿಜೆಪಿ ರಾಜಕೀಯ ಹೋರಾಟ ಮಾಡಿಲ್ಲ ಎಂದು ಟೀಕಿಸಿದರು.

ಕೇಂದ್ರದಿಂದ  ನಿಮಗೆ ಬರಬೇಕಿರುವ ತೆರಿಗೆ ಪಾಲಿನಲ್ಲಿ 17,600 ಕೋಟಿ ರೂ.ಖೋತಾ ಆಗಿದೆ.  ಮುಖ್ಯಮಂತ್ರಿಯವರು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಲ್ಪಸಂಖ್ಯಾತ ನಿಯೋಗದೊಂದಿಗೆ  ಮಾತನಾಡುವಾಗ ಈ ಬಾರಿ 30 ಸಾವಿರ ಕೋಟಿ ರೂ. ತೆರಿಗೆ ಪಾಲು ಕಡಿಮೆಯಾಗಲಿದೆ ಎಂದು  ಹೇಳಿದ್ದಾರೆ ಎಂದು ನಿಯೋಗದಲ್ಲಿದ್ದವರು ತಮಗೆ ತಿಳಿಸಿದ್ದಾರೆ.

ನಮ್ಮ  ಜಿಎಸ್‌ಟಿ ಪಾಲು 39,000 ಕೋಟಿ ರೂ. ನಿರೀಕ್ಷೆ ಇತ್ತು. ಆದರೆ ಬಂದಿರುವುದು 30 ಸಾವಿರ  ಕೋಟಿ ರೂ.ಮಾತ್ರ. ಇದರಿಂದ 9 ಸಾವಿರ ಕೋಟಿ ನಷ್ಟವಾಗಿದೆ. ಇದು ರಾಜ್ಯಕ್ಕೆ ಆಗಿರುವ  ಅನ್ಯಾಯವಲ್ಲವೇ  ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 2019-20ನೇ ಸಾಲಿನಲ್ಲಿ ಕೇಂದ್ರ  ನೀಡಲೇಬೇಕಾಗಿದ್ದ ಮೊತ್ತದಲ್ಲಿ  17 ಸಾವಿರ ಕೋಟಿ ಕೊರತೆಯಾಗಲಿದೆ ಎಂದು ಪತ್ರಿಕೆಯೊಂದು  ವರದಿ ಮಾಡಿದೆ. ಒಂದು ವರ್ಷದಲ್ಲಿ 11, 215 ಕೋಟಿ ರೂ. ಕಡಿಮೆಯಾದರೆ ಐದು ವರ್ಷಗಳಲ್ಲಿ  60 ಸಾವಿರ ಕೋಟಿ ರೂ. ಕಡಿಮೆಯಾಗಲಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ?  ಇದು ಸಣ್ಣ ಮೊತ್ತವೇ ?. ಪ್ರತಿ ವರ್ಷ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಹಾಗಾಗಿ ನಮ್ಮ  ಪಾಲು ಹೆಚ್ಚಾಗಬೇಕು. ಆದರೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಈ ಬಗ್ಗೆ  ನಮ್ಮ ಶಾಸಕರು ಅರ್ಥಮಾಡಿಕೊಂಡು ಇದರ ವಿರುದ್ಧ ಧ್ವನಿ ಎತ್ತಬೇಕು. ನಾವು ಕೇಂದ್ರಕ್ಕೆ  ಒಂದು ರೂಪಾಯಿ ಕೊಟ್ಟರೆ 45 ಪೈಸೆ ವಾಪಾಸ್ ಬರುತ್ತದೆ. ಅದೇ ಉತ್ತರ ಪ್ರದೇಶದವರು ಒಂದು  ರೂಪಾಯಿ ಕೊಟ್ಟರೆ ಅವರಿಗೆ 235 ಪೈಸೆ, ಗುಜರಾತ್‌ ಮತ್ತು ಬಿಹಾರಕ್ಕೆ  200 ಚಿಲ್ಲರೆ  ರೂಪಾಯಿ ವಾಪಾಸ್ ಬರುತ್ತದೆ. ನಮಗೆ ಮಾತ್ರ 45 ಪೈಸೆ ಬರುತ್ತಿದೆ. ಇದು ರಾಜ್ಯಕ್ಕೆ  ಅನ್ಯಾಯವಲ್ಲವೇ ? ಇದರ ವಿರುದ್ಧ

ನಾವು ರಾಜಕೀಯವಾಗಿ ಹೋರಾಡಿಲ್ಲ.  ಗುಜರಾತ್ ಅಭಿವೃದ್ಧಿ ಹೊಂದಿದ ರಾಜ್ಯವಾಗಿದ್ದರೂ 200ಕ್ಕೂ ಪೈಸೆ ಏಕೆ ನೀಡಲಾಗುತ್ತಿದೆ ಎಂದು  ಪ್ರಶ್ನಿಸಿದ ಅವರು, ಅಲ್ಲಿ ತೆರಿಗೆ ಸಂಗ್ರಹ ಸರಿಯಾಗಿ ಆಗುತ್ತಿಲ್ಲ ಎಂಬ ಸಮರ್ಥನೆ  ನೀಡಲಾಗುತ್ತಿದೆ, ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಸಮರ್ಪಕವಾಗಿ ತೆರಿಗೆ ಸಂಗ್ರಹ  ಮಾಡಬೇಕಿತ್ತು. ಜಿಎಸ್‌ಟಿ, ನೋಟು ಅಮಾನ್ಯೀಕರಣದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು  ಸಿದ್ದರಾಮಯ್ಯ ಟೀಕಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಸುಮಾರು ಒಂದು ತಿಂಗಳ ಕಾಲ ಯಾರೂ ಸಚಿವರು ಇರಲಿಲ್ಲ. ಏಕಚಕ್ರಾಧಿಪತ್ಯ ಅವರದ್ದಾಗಿತ್ತು. ದುರದೃಷ್ಟವಶಾತ್ ಆಗಸ್ಟ್ 3ರಿಂದ 10ರವರೆಗೆ ಕಂಡುಕೇಳರಿಯರದಂತಹ ಪ್ರವಾಹ ಉಂಟಾಯಿತು. 100 ವರ್ಷಗಳ ನಂತರ  ಎಲ್ಲಾ ಪ್ರಮುಖ ನದಿಗಳು ಉಕ್ಕಿ ಹರಿದವು. ಇಂತಹ ಸಂದರ್ಭದಲ್ಲಿ  ಪ್ರವಾಹ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಿಲ್ಲ. ಇದರಿಂದ ಸಂತ್ರಸ್ತರು ಸಂಕಷ್ಟಕ್ಕೆ ಒಳಗಾಗಿದ್ದರು. ಅವರ ಕಷ್ಟ ಕೇಳಿ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಆಗ ಮಧ್ಯಪ್ರವೇಶಿಸಿದ ವಸತಿ ಸಚಿವ ವಿ.ಸೋಮಣ್ಣ, ಬಾಗಲಕೋಟೆ, ಗದಲ, ಕೊಡಗು, ಹಾಸನ, ಮೈಸೂರಿ ಪ್ರವಾಹದಿಂದ ತೊಂದರೆಯಾಗಿತ್ತು. ಈಗಾಗಲೇ ಪರಿಹಾರ ಬಿಡುಗಡೆಯಾಗಿದ್ದು, ಮನೆ ನಿರ್ಮಿಸಿಕೊಡುವ ಕೆಲಸ ನಡೆಯುತ್ತಿದೆ. ಮೂರರಿಂದ ನಾಲ್ಕು ತಿಂಗಳಲ್ಲಿ ಎಲ್ಲಾ ಮನೆಗಳ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.

ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ 10 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಯಿತು. ಅದರ ಸರ್ವೆಯನ್ನೂ ಮಾಡಿಲ್ಲ, ಮನವಿ ಪತ್ರವನ್ನೂ ಸಲ್ಲಿಸಿಲ್ಲ. ಪರಿಹಾರವನ್ನೂ ನೀಡಲಿಲ್ಲ ಎಂದು ಹೇಳಿದ ಸಿದ್ದರಾಮಯ್ಯ,  ರಾಜ್ಯದ 7777 ಪ್ರಾಥಮಿಕ ಶಾಲೆಗಳು, ಮತ್ತು ಹೈಸ್ಕೂಲ್‌ನ ಕೊಠಡಿಗಳಿಗೆ ಪ್ರವಾಹದಿಂದ ಹಾನಿಯಾಗಿದ್ದವು. ಇವುಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ 1500 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಪ್ರವಾಹ ಬಂದು ಆರು ತಿಂಗಳಾದರೂ ಕೇವಲ 199 ಕೋಟಿ ರೂ. ಬಿಡುಗಡೆಮಾಡಲಾಗಿದೆ. ಇನ್ನೂ ಹಲವೆಡೆ ಮಕ್ಕಳು ಜಗಲಿಯಲ್ಲಿ, ದೇವಸ್ಥಾನದಲ್ಲಿ ಓದುತ್ತಿದ್ದಾರೆ. ಸರಿಯಾದ ಸಮಯಕ್ಕೆ ಪಠ್ಯಪುಸ್ತಕ ಬಿಡುಗಡೆ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣ ಹೇಗೆ ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳಿದರು.

ಸಂತ್ರಸ್ತರಿಗೆ ಆಶ್ರಯ ಮನೆ ರೀತಿಯಲ್ಲಿ ಮನೆ ಕಟ್ಟಿಕೊಡಲು ಆಗುವುದಿಲ್ಲ. ಸಂತ್ರಸ್ತರಿಗೆ ಒಂದು ಲಕ್ಷ ರೂ. ಕೊಟ್ಟು ಸುಮ್ಮನಾಗಿದ್ದಾರೆ. 4 ಲಕ್ಷ 34 ಸಾವಿರ ಕುಟುಂಬಗಳಿಗೆ ಬೆಳೆ ಪರಿಹಾರವಾಗಿ 1126  ಕೋಟಿ ರೂ.ಪರಿಹಾರ ನೀಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇನ್ನೂ ಅನೇಕ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರವಾಹದಿಂದ ಮೀನುಗಾರರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದರು. ಪ್ರವಾಹದಿಂದ ಬೋಟು ಮತ್ತು ಬಲೆ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು, ಈಗಾಗಲೇ ವಿಳಂಬವಾಗಿದ್ದು, ತಕ್ಷಣ ಅವರಿಗೆ ಪರಿಹಾರ ನೀಡಬೇಕು. ಇದುವರೆಗೆ ಮೀನುಗಾರರಿಗೆ ಒಂದು ರೂಪಾಯಿ ಪರಿಹಾರ ಸಿಕ್ಕಿಲ್ಲ. ಇದು ಬಾಗಲಕೋಟೆ ಒಂದು ಜಿಲ್ಲೆಯ ಪರಿಸ್ಥಿತಿಯಲ್ಲ. ಇಡೀ ರಾಜ್ಯದಲ್ಲಿ ಪರಿಸ್ಥಿತಿ ಇದೆ. ಯಾವುದೇ ಮೀನುಗಾರರಿಗೆ ಒಂದು ರೂಪಾಯಿ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.

ಪರಿಹಾರ ನೀಡಿಲ್ಲ ಎಂದು ಅನೇಕ ಕಡೆ ಸಂತ್ರಸ್ತರು ಪ್ರತಿಭಟನೆ ನಡೆಸಲಾಗುತ್ತಿದೆ. ಕೊಡಗಿನಲ್ಲಿ ಈಗಲೂ ಪ್ರತಿಭಟನೆ ನಡೆಯುತ್ತಿದೆ. ರಾಮದುರ್ಗ ತಾಲೂಕಿನಲ್ಲಿ ಪರಿಹಾರ ಸಿಕ್ಕಿಲ್ಲ ಎಂದು ಸಹಾಯಕ ಆಯುಕ್ತರಿಗೆ ದಿಗ್ಭಂದನ ವಿಧಿಸಲಾಗಿತ್ತು. ಪ್ರವಾಹ ಬಂದಾಗ ಜಮೀನಿನ ಮಣ್ಣು ಕೊಚ್ಚಿ ಹೋಗಿದೆ. ಅದಕ್ಕೂ ಪರಿಹಾರ ಕೊಟ್ಟಿಲ್ಲ. ಅಲ್ಲಿ ಇನ್ನು ವ್ಯವಸಾಯ ಮಾಡಲು ಸಾಧ್ಯವಿಲ್ಲ. ಅವರಿಗೂ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ ಸಿದ್ದರಾಮಯ್ಯ, ಕೆಲವೆಡೆ ಸಂತ್ರಸ್ತರಿಗೆ ಟೆಂಟ್ ಹಾಕಿಕೊಟ್ಟಿದ್ದರೂ ಅಲ್ಲಿ ಯಾವುದೇ ಶೌಚಾಲಯ ಸೇರಿದಂತೆ ಮೂಲಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಿದರು.

ಪ್ರವಾಹ ಪರಿಹಾರ ಸಮರ್ಪಕವಾಗಿ ವಿತರಣೆಯಾಗಿಲ್ಲ. ಜಿಲ್ಲಾ ಮಂತ್ರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಕಂದಾಯ, ಕೃಷಿ, ಸಹಕಾರ, ವಸತಿ, ತೋಟಗಾರಿಕಾ, ಮೀನುಗಾರಿಕಾ ಸಚಿವರನ್ನು ಸೇರಿಸಿ ಒಂದು ತಂಡ ಮಾಡಬೇಕಿತ್ತು. ಈ ತಂಡ ಸಂತ್ರಸ್ತರ ಕಷ್ಟ ಸುಖ ಕೇಳಿ ಪರಿಹಾರ ನೀಡಬೇಕಿತ್ತು. ಆದರೆ ಕೆಲವು ಸಚಿವರು ಒಂದಿಷ್ಟು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆಯೇ ಹೊರತು ಒಂದು ತಂಡವಾಗಿ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ದೂರಿದರು.

3276 ಕೋಟಿ ವಸತಿ ಇಲಾಖೆಗೆ ಅನುದಾನ ಹಂಚಿಕೆಯಾಗಿದ್ದರೆ ಬಿಡುಗಡೆಯಾಗಿರುವುದು 1420 ಕೋಟಿ ರೂ. ಮಾತ್ರ. ಅಂದರೆ ಶೇಕಡಾ 40ರಷ್ಟು ಮಾತ್ರ ಬಿಡುಗಡೆಯಾಗಿದೆ ಎಂದು ಸಿದ್ದರಾಮಯ್ಯ ಅಂಕಿ ಅಂಶಗಳ ಸಮೇತ ವಿವರಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Leave a Comment