ಕೆ2-18ಬಿ ಗ್ರಹದಲ್ಲಿ ಜೀವ ಸಾಧ್ಯತೆ

ನಮ್ಮ ಸೌರಮಂಡಲದ ಆಚೆಗಿನ ನಕ್ಷತ್ರ ಮಂಡಲಕ್ಕೆ ಸೇರಿದ ಕೆ೨-೧೮ಬಿ ಗ್ರಹದಲ್ಲಿ ಅನ್ಯಗ್ರಹ ಜೀವಿಗಳು ವಾಸಿಸಲು ಯೋಗ್ಯ ವಾತಾವರಣ ಇರುವ ಸಾಧ್ಯತೆ ದಟ್ಟವಾಗಿದೆ ಎಂದು ಇತ್ತೀಚೆಗೆ (ಡಿ. ೬ರಂದು) ಟೊರೆಂಟೊ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳಿದ್ದಾರೆ.

ನಾವಿರುವ ಭೂಮಿಯಿಂದ ೧೧೧ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಕೆ೨-೧೮ಬಿ ಗ್ರಹವನ್ನು ನಾಸಾದ ಕೆಪ್ಲರ್ ಮಿಷನ್ ೨೦೧೫ರಲ್ಲಿಯೇ ಗುರಿವೆನಿಸಿತ್ತು. ಆ ಬಗ್ಗೆ ಅದು ಕಲೆ ಹಾಕಿದ್ದ ದತ್ತಾಂಶಗಳನ್ನು ಹಾಗೂ ಐರೋಪ್ಯ ದಕ್ಷಿಣ ವೀಕ್ಷಣಾಲಯದ (ಇ.ಎಸ್.ಓ) ದತ್ತಾಂಶಗಳನ್ನು ಅಧ್ಯಯನ ಮಾಡಿರುವ ಟೊರೆಂಟೊ ಮತ್ತು ಮಾಂಟ್ರಿಯಲ್ ವಿಶ್ವವಿದ್ಯಾನಿಲಯದ ಅಧ್ಯಯನ ತಂಡ ಆ ಗ್ರಹದಲ್ಲಿ ಅನ್ಯಗ್ರಹ ಜೀವಿಗಳು ವಾಸಿಸಲು ದ್ರವರೂಪದಲ್ಲಿಯ ನೀರು ಸೇರಿದಂತೆ ಪೂರಕ ವಾತಾವರಣ ಇರುವ ಸಾಧ್ಯತೆ ಇದೆ ಎಂದಿದ್ದಾರೆ.

ಈ ಗ್ರಹ ಕೆ೨-೧೮ ಎಂಬ ಕೆಂಪು ಕುಬ್ಜ ನಕ್ಷತ್ರದ ಸುತ್ತ ಸುತ್ತುತ್ತಿರುವುದರಿಂದ ಈ ಗ್ರಹಕ್ಕೆ ಕೆ೨-೧೮ಬಿ ಎಂದು ಹೆಸರಿಸಲಾಗಿದೆ. ‘ನಮ್ಮ ಸೌರಮಂಡಲದ ಆಚೆಗಿನ ಗ್ರಹವನ್ನು ಪತ್ತೆ ಮಾಡಿರುವುದು ಹಾಗೂ ಪತ್ತೆಯಾಗಿರುವ ಕೆ೨-೧೮ಬಿ ಗ್ರಹದಲ್ಲಿಯ ಸಾಂದ್ರತೆ ತಿಳಿಯಲು ಸಾಧ್ಯವಾಗಿರುವುದು ಅಪರೂಪ ಹಾಗೂ ಅದ್ಭುತ ಎಂದು ಟೊರೊಂಟೊ ವಿವಿಯ ಸಂಶೋಧಕ ಱ್ಯಾನ್ ಕ್ಲೌಟಿಯಾರ್ ಹೇಳಿದ್ದಾರೆ.

ಅನ್ಯಗ್ರಹಗಳ ಶೋಧನೆಯಲ್ಲಿ ತೊಡಗಿರುವ ನಾಸಾದ ಕೆಪ್ಲರ್ ಮಿಷನ್ ಈಗಾಗಲೇ ಹಲವು ಹೊಸ ಗ್ರಹಗಳನ್ನು ಗುರುತಿಸಿದ್ದು, ಅವುಗಳಲ್ಲಿ ಕೆಲವು ಗ್ರಹಗಳಲ್ಲಿ ಅನ್ಯಗ್ರಹ ಜೀವಿಗಳ ವಾಸ ಯೋಗ್ಯ ವಾತಾವರಣ ಇರುವುದನ್ನು ಅಂದಾಜಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಅನ್ಯಗ್ರಹ ಜೀವಿಗಳ ಶೋಧನೆ ಚುರುಕುಗೊಂಡಿದೆ. ನಮ್ಮ ಸೌರಮಂಡಲದ ಆಚೆಗಿನ ಗ್ರಹಗಳಲ್ಲಿ ಮನುಷ್ಯನನ್ನು ಹೋಲುವ ಪ್ರಾಣಿಗಳು ಇವೆ ಎಂಬ ಶೋಧನೆಯಲ್ಲಿ ತೊಡಗಿರುವ ಈ ಖಗೋಳ ವಿಜ್ಞಾನಿಗಳಿಗೆ ಇತ್ತೀಚೆಗೆ ಅನ್ಯ ತಾರಾಮಂಡಲದ ಯಾವುದೋ ಗ್ರಹದಿಂದ ಬಂದ ರೇಡಿಯೋ ಸಂಕೇತಗಳು ಹೊಸ ಭರವಸೆ, ಉತ್ಸಾಹ ಮೂಡಿಸಿದೆ. ಈ ಹಿನ್ನೆಲೆಯೇ ಅತಿ ಉತ್ಸಾಹದಿಂದಲೇ ಭೂಮಿಯಿಂದ ಅನ್ಯಗ್ರಹ ಜೀವಿಗಳು ಇರುವ ಸಾಧ್ಯತೆ ಇರುವ ಗ್ರಹಗಳನ್ನು ಗುರಿಯಾಗಿಸಿಕೊಂಡು ಭೂಮಿಯಿಂದ ರೇಡಿಯೋ ಸಂಕೇತಗಳಿಂದ ಕೂಡಿದ ಸಂದೇಶವನ್ನು ರವಾನಿಸಲಾಗಿದೆ. ಒಂದಲ್ಲಾ ಒಂದು ದಿನ ನಾವು ಕಳುಹಿಸಿರುವ ಸಂದೇಶಕ್ಕೆ ಅನ್ಯಗ್ರಹಗಳಿಂದ ಮರುಸಂದೇಶ ಬರಬಹುದು ಎಂಬ ನಿರೀಕ್ಷೆಯನ್ನು ವಿಜ್ಞಾನಿಗಳು ಹೊಂದಿದ್ದಾರೆ.

ಉತ್ತನೂರು ವೆಂಕಟೇಶ್

Leave a Comment