ಕೆ.ಎಸ್.ಆರ್.ಟಿ.ಸಿ ನೇಮಕಾತಿ: ವಂಚಕರಿಂದ ದೂರವಿರಿ: ಶಿವಯೋಗಿ ಕಳಸದ್

ಬೆಂಗಳೂರು, ಜೂ 30 -ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ತಾಂತ್ರಿಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ನಿಯೋಜನೆಗೆ ಆದೇಶ ಹೊರಡಿಸಿರುವುದಾಗಿ ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್‌ನಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದು, ಜನತೆ ಈ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶವ್ಯಾಪಿ ಕೋವಿಡ್-19 ಸೋಂಕು ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳ ನೇಮಕಾತಿ ಪೂರ್ಣಗೊಂಡಿದ್ದು, ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗಮದ ವಿವಿಧ ವಿಭಾಗಗಳಲ್ಲಿ ತರಬೇತಿಗಾಗಿ ಈಗಾಗಲೇ ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.

ಪ್ರಸ್ತುತ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಇಂತಹ ನಕಲಿ ಆದೇಶಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ನಿಗಮದಲ್ಲಿ ಯಾವುದೇ ಹುದ್ದೆ ಕೊಡಿಸುವುದಾಗಿ ಯಾರಾದರೂ ಆಮಿಷವೊಡ್ಡಿದಲ್ಲಿ ಈ ಬಗ್ಗೆ ಮೊಬೈಲ್ ದೂರವಾಣಿ ೭೭೬೦೯೯೦೦೫೧ ಮತ್ತು ೭೭೬೦೯೯೦೦೯೫ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದಿದ್ದಾರೆ.

Share

Leave a Comment