ಕೆ.ಎಸ್.ಆರ್.ಟಿ.ಸಿಗೆ ಜಾಗತಿಕ ಮನ್ನಣೆ ಪ್ರಶಸ್ತಿ

ಬೆಂಗಳೂರು, ಅ. ೨೯- ಬ್ರೂಸಲ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ್ ಅವರಿಗೆ ವೋಲ್ವೋ ಬಸ್ ಇಂಟರ್ ನ್ಯಾಷನಲ್ ಅಧ್ಯಕ್ಷ ಹಕನ್ ಅಗ್ನೆವಾಲ್ ಅವರು, ಜಾಗತಿಕ ಮನ್ನಣೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
೨೧ನೇ ಅಂತಾರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಸಮ್ಮೇಳನ ಮತ್ತು ಬಸ್‌ಗಳ ಪ್ರದರ್ಶನ ನಂತರ, ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮವು ಅಂತಾರಾಜ್ಯ ಮತ್ತು ರಾಜ್ಯದೊಳಗೆ ಸಂಚರಿಸುವ ವೋಲ್ವೋ ಬಸ್‌ಗಳು ಹೆಚ್ಚಿನ ಮೈಲೇಜ್ ಮತ್ತು ತಡೆರಹಿತ ೨೦ ಲಕ್ಷ ಕಿ.ಮೀ. ಬಸ್ ಕಾರ್ಯಾಚರಣೆಗೊಳಿಸುವುದಕ್ಕಾಗಿ ಈ ಜಾಗತಿಕ ಮನ್ನಣೆ ಸಂದಿದೆ.
ಬೆಂಗಳೂರು ಕೇಂದ್ರೀಯ ವಿಭಾಗದ ಒಂದು ಮಲ್ಟಿ ಆಕ್ಸೆಲ್ ವೋಲ್ವೋ ವಾಹನ ಮತ್ತು ಒಂದು ಸಿಂಗಲ್ ಆಕ್ಸಲ್ ವೋಲ್ವೋ ವಾಹನಗಳು ಯಾವುದೇ ಪ್ರಮುಖ ತೊಂದರೆ ಇಲ್ಲದೆ, ೨೦ ಲಕ್ಷ ಕಿ.ಮೀ. ಕ್ರಮಿಸಿವೆ. ಇತರ ೧೩ ವಾಹನಗಳು ೧೮ ಲಕ್ಷ ಕಿ.ಮೀ. ಕ್ರಮಿಸಿದ್ದು, ದೂರದ ಮಾರ್ಗಗಳಲ್ಲಿ ಇನ್ನೂ ಸಹ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.
ಮಂಗಳೂರು ವಿಭಾಗದಲ್ಲಿ ಒಂದು ವೋಲ್ವೋ ಬಸ್ ೨೧.೫ ಲಕ್ಷ ಕಿ.ಮೀ. ಕ್ರಮಿಸಿದೆ. ಇತರ ೧೪ ವೋಲ್ವೋ ಬಸ್‌ಗಳು ೧೮ ಲಕ್ಷ ಕಿ.ಮೀ. ದೂರ ಕ್ರಮಿಸಿವೆ. ಅದೇ ರೀತಿ ಮೈಸೂರು ಗ್ರಾಮಾಂತರ ವಿಭಾಗದ ೪ ವೋಲ್ವೋ ಬಸ್‌ಗಳು ಈಗಾಗಲೇ ೧೯ ಲಕ್ಷ ಕಿ.ಮೀ. ಕ್ರಮಿಸಿವೆ ಎಂದು ಕೆ.ಎಸ್.ಆರ್.ಟಿ.ಸಿ. ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.
ವೋಲ್ವೋ ಬಸ್ ಚಾಲಕರು, ಮೆಕ್ಯಾನಿಕ್ ಮತ್ತು ಅಧಿಕಾರಿಗಳು ಅತ್ಯುತ್ತಮ ನಿರ್ವಹಣೆ ಚಾಲನಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದರಿಂದ ವೋಲ್ವೋ ಬಸ್‌ಗಳಲ್ಲಿ ಇಲ್ಲಿನ ರಸ್ತೆಯಲ್ಲಿಯೂ ಈ ಸಾಧನೆ ಸಾಧ್ಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment