ಕೆ.ಆರ್.ಪೇಟೆ: ಸಮಗ್ರ ಕೃಷಿ ಅಭಿಯಾನ ; ಸಾವಯವ ಬೇಸಾಯ ಕೈಗೊಳ್ಳಲು ಸಲಹೆ

ಕೆ.ಆರ್.ಪೇಟೆ,ಆ.14- ರೈತರು ಭೂ ತಾಯಿಯನ್ನು ನಂಬಿ ಬೇಸಾಯ ಮಾಡಬೇಕು. ಜೊತೆಗೆ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಮಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತಿರುವ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕೈಬಿಟ್ಟು ಸಾವಯವ ಬೇಸಾಯವನ್ನು ಕೈಗೊಳ್ಳುವುದರ ಮೂಲಕ ಭೂಮಿಯ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಫಸಲು ಬೆಳೆಯಲು ಮುಂದಾಗಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿಸ್ವಾಮಿನಾಯಕ್ ಹೇಳಿದರು.
ಅವರು ತಾಲೂಕಿನ ಬೂಕನಕೆರೆ ಹೋಬಳಿ ಕೇಂದ್ರದಲ್ಲಿರುವ ಸಮುದಾಯ ಭವನದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನದ ಅಂಗವಾಗಿ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಕಷ್ಟು ದೇಶಗಳು ರಾಸಾಯನಿಕ ಗೊಬ್ಬರಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸುತ್ತಿವೆ. ಸಾವಯವ ಬೇಸಾಯವನ್ನು ಹೆಚ್ಚಾಗಿ ಬಳಕೆ ಮಾಡುತ್ತಿವೆ. ಇದರಿಂದ ಆ ದೇಶದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇರೆ ದೇಶಗಳಲ್ಲಿ ಉತ್ತಮ ಬೇಡಿಕೆ ಇದ್ದು ಆಮದು ಮಾಡಿಕೊಂಡು ಬಳಸುತ್ತಿವೆ ಆದರೆ ನಮ್ಮ ದೇಶದಲ್ಲಿ ಯಥೇಚ್ಚವಾಗಿ ರಸಗೊಬ್ಬರ, ವಿಷಕಾರಕ ಕೀಟನಾಶಕ ಬಳಸಿ ಬೆಳೆದ ಕೃಷಿ ಉತ್ಪನ್ನಗಳನ್ನು ಹೊರದೇಶಗಳು ಸೇವಿಸಲು ಯೋಗ್ಯವಲ್ಲ ಎಂದು ತಿರಸ್ಕರಿಸುತ್ತಿವೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೇ ರೈತರು ತೊಂದರೆಗೆ ಒಳಗಾಗಿದ್ದಾರೆ. ಹಾಗಾಗಿ ರೈತರು ಇನ್ನಾದರೂ ರಾಸಾಯನಿಕ ಗೊಬ್ಬರ ಪದ್ದತಿಯನ್ನು ದೂರ ಮಾಡಿ, ಸಾವಯವ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ಬಳಕೆ ಮಾಡುವ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಬೇಸಾಯ ಮಾಡಿದರೆ ಉತ್ತಮ ಫಲಸನ್ನು ಬೆಳೆಯಬಹುದು ಎಂದು ಜಯಲಕ್ಷ್ಮೀಸ್ವಾಮಿನಾಯಕ್ ಹೇಳಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗಾಯಿತ್ರಿರೇವಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೃಷಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಟಿ.ಎಸ್.ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮಂಡ್ಯದ ವಿ.ಸಿ.ಫಾರಂ ಕೃಷಿ ವಿಜ್ಞಾನಿಗಳಾದ ಡಾ.ವೆಂಕಟೇಶ್, ಡಾ.ಶ್ರೀನಿವಾಸಶೆಟ್ಟಿ ಸಮಗ್ರ ಕೃಷಿ ಕುರಿತು ಉಪನ್ಯಾಸ ನೀಡಿದರು.
ತಾಲೂಕು ಎ.ಪಿ.ಎಂ.ಸಿ. ಅಧ್ಯಕ್ಷ ಎಂ.ಪಿ.ಲೋಕೇಶ್, ತಾಲೂಕು ಪಂಚಾಯಿತಿ ಸದಸ್ಯರಾದ ಮೀನಾಕ್ಷಿಪುಟ್ಟರಾಜು, ಕಮಲಮ್ಮಬಸವೇಶ್, ರೈತ ಮುಖಂಡರಾದ ಅಂಗಡಿ ನಾಗರಾಜು, ಪ್ರಗತಿಪರ ರೈತ ವಿಠಲಾಪುರ ಸುಬ್ಬೇಗೌಡ, ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಪಿ.ಎಸ್.ಎಸ್.ಕೆ. ಮಾಜಿ ಉಪಾಧ್ಯಕ್ಷ ಬಿ.ಬೋಳೇಗೌಡ, ಎಪಿಎಂಸಿ ಉಪಾಧ್ಯಕ್ಷೆ ಮಹೇಶ್ವರಿನರಸೇಗೌಡ, ನಿರ್ದೇಶಕರಾದ ಅಶೋಕ್, ತಾಲೂಕು ಕೃಷಿ ಅಧಿಕಾರಿಗಳಾದ ಮಾನಸ, ಶ್ರೀಧರ್, ಆನಂದ್‍ಕುಮಾರ್, ಜಯಶಂಕರಆರಾಧ್ಯ, ಶಾಲಿನಿ, ಆತ್ಮ ಯೋಜನೆಯ ದರ್ಶಿನಿ, ಕೃಷಿ ತಾಂತ್ರಿಕ ಉತ್ತೇಜಕರಾದ ರಾಜೇಶ್, ಯೋಗೇಶ್, ರಮೇಶ್, ಸತೀಶ್, ಪ್ರಕಾಶ್, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ ಇಲಾಖೆಯ ವತಿಯಿಂದ ಕೃಷಿ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

Leave a Comment