ಕೆ.ಆರ್.ಎಸ್. ಜಲಾಶಯ ಉಳಿಸಿ-ಪಾದಯಾತ್ರೆ ಆರಂಭ

ಮೈಸೂರು.ನ.9- ಕೆ.ಆರ್.ಎಸ್. ಜಲಾಶಯದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಈ ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿ ಇಂದು ಮಧ್ಯಾಹ್ನ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕೆ.ಆರ್.ಎಸ್.ಉಳಿಸಿ ಪಾದಯಾತ್ರೆ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಕ.ಕ.ಜ.ವೇ. ಕಾರ್ಯಕರ್ತರು ಕೆ.ಆರ್.ಎಸ್.ಜಲಾಶಯ ನಮ್ಮ ರಾಜ್ಯದ ಜೀವನಾಡಿಯಂತಿದೆ. ಅದಕ್ಕೆ ಧಕ್ಕೆಯಾದರೆ ನಾವೆಲ್ಲರೂ ನಿರ್ನಾಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೆ.ಆರ್.ಎಸ್ ಜಲಾಶಯದ ಸುತ್ತಮುತ್ತ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರವು ಕಣ್ಣು ಮುಚ್ಚಿ ಕುಳಿತಿರುವುದನ್ನು ನೋಡಿದರೆ ಸರ್ಕಾರವೂ ಸಹಾ ಕಲ್ಲು ಗಣಿಗಾರಿಕೆಯಲ್ಲಿ ಭಾಗಿಯಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾದಂತಾಗಿದೆ. ಇದರಲ್ಲಿ ಕೆಲವ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವೂ ಇದೆ ಎಂದು ಆಪಾದಿಸಿದರು.
ಮುಂದಿನ ದಿನಗಳಲ್ಲಿ ಕೆ.ಆರ್.ಎಸ್. ಜಲಾಶಯದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಇಂದಿನಿಂದ ಪಾದಯಾತ್ರೆಯನ್ನು ಆರಂಭಿಸಲಾಗಿದೆ. ಈ ಪಾದಯಾತ್ರೆಯು 7 ದಿನಗಳ ಕಾಲ ನಡೆಯಲಿದ್ದು ನಾವು ಈ ಪಾದಯಾತ್ರೆಯ ಮೂಲಕವೇ ಬೆಂಗಳೂರಿಗೆ ತಲುಪಿ, ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಮುಂದಿನ ಭಾನುವಾರ ಕೆ.ಆರ್.ಎಸ್. ಜಲಾಶಯ ಉಳಿಸಲು ಉಗ್ರ ಹೋರಾಟವನ್ನು ನಡೆಸುತ್ತೇವೆ. ಪಾದಯಾತೆಯು ಮೈಸೂರು, ಶ್ರೀರಂಗಪಟ್ಟಣ,ಮಂಡ್ಯ,ಮದ್ದೂರು,ಚನ್ನಪಟ್ಟಣ,ರಾಮನಗರ,ಕೆಂಗೇರಿ ಮೂಲಕ ಸಾಗಿ ಬೆಂಗಳೂರು ತಲುಪಲಿದೆ ಎಂದು ಮಾಹಿತಿ ನೀಡಿದರು.

Leave a Comment