ಕೆಸರೆರಚಾಟ ಬಿಟ್ಟು, ರಾಜ್ಯದ ಅಭಿವೃದ್ದಿಯತ್ತ ಗಮನ ನೀಡಿ

ತುಮಕೂರು, ಫೆ. ೧೧- ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರ ಆಂತರಿಕ ಕಿತ್ತಾಟದಿಂದ ರಾಜಕೀಯ ಅರಾಜಕತೆ  ಉಂಟಾಗಿದ್ದು, ಕೂಡಲೇ ಇಂತಹ ಗೊಂದಲಗಳಿಗೆ ಪರಿ ಸಮಾಪ್ತಿ ಹಾಡುವಂತೆ ಕರ್ನಾಟಕ ವೀರಶೈವ-ಲಿಂಗಾಯಿತ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಪರಸ್ಪರ ನಾಯಕರ ಕಿತ್ತಾಟ, ಆಡಿಯೋ ಬಿಡುಗಡೆ ಸೇರಿದಂತೆ ನಡೆಯುತ್ತಿರುವ ವಿದ್ಯಮಾನಗಳಿಂದ ಇಡೀ ರಾಜ್ಯದ ಮಾನ, ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ನಡತೆಯನ್ನು ಬಿಟ್ಟು ಹೋಗುವಂತೆ ಅವರು ಸಲಹೆ ನೀಡಿದರು.

ಕಳೆದ 2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಉತ್ತಮ ಆಡಳಿತ ನೀಡಿದ್ದನ್ನು ನಾವು ಗಮನಿಸ ಬಹುದಾಗಿದೆ. ಅಂದು ನೀಡಿದ ಆಡಳಿತವನ್ನು ಇಂದಿಗೂ ರಾಜ್ಯದ ಜನತೆ ಮರೆತಿಲ್ಲ. ಆ ರೀತಿ ಉತ್ತಮ ಆಡಳಿತದ ಮೂಲಕ ಜನತೆಗೆ ಅನುಕೂಲ ಮಾಡಿಕೊಟ್ಟರೆ ಮುಂದಿನ ಜನಾಂಗ ನಿಮ್ಮನ್ನು ಮರೆಯುವುದಿಲ್ಲ. ಆದರೆ ಈ ರೀತಿ ಕೆಸರೆರಚಾಟದಿಂದ ಯಾರಿಗೂ ಲಾಭವಿಲ್ಲ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರುಗಳು ಪರಸ್ಪರ ಆಡಿಯೋ, ವಿಡಿಯೋದಂತಹ ಆರೋಪ ಮಾಡುವುದನ್ನು ಬಿಟ್ಟು, ಬರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡಲಿ ಎಂದು ಸಲಹೆ ನೀಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಆಡಿಯೋ ಟೇಪ್ ಬಿಡುಗಡೆ ಮಾಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು, ನಕಲಿ ಟೇಪ್ ರೆಡಿ ಮಾಡಿ, ಒಂದು ಸಮುದಾಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಇದು ಸಮುದಾಯಗಳ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಕೆಟ್ಟ ಸಂಸ್ಕೃತಿಗೆ ಪೂರ್ಣ ವಿರಾಮ ನೀಡುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಟಿ.ಆರ್.ಸದಾಶಿವಯ್ಯ, ವಿಜಯಕುಮಾರ್, ಅಭಿಲಾಷ್, ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment