ಕೆಸರು ಗದ್ದೆಯಾದ ಜೇಗರಕಲ್-ಮೀರಾಪೂರು ರಸ್ತೆ

ರಾಯಚೂರು.ಜು.11- ಗ್ರಾಮಾಂತರ ವಿಧಾನಸಭಾ ಜೇಗರಕಲ್, ಮೀರಾಪೂರು ರಸ್ತೆ ಸಂಪೂರ್ಣ ಹದಗೆಟ್ಟು ಜನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸುಮಾರು 8 ಕಿ.ಮೀ. ಅಂತರದ ಈ ರಸ್ತೆಯಲ್ಲಿ ಓಡಾಟ ದುಸ್ಸಾಹಸ ಎನ್ನುವಂತಿದೆ. ಡಾಂಬರೀಕರಣ ಸಂಪೂರ್ಣ ಕಿತ್ತು ಹೋದ ರಸ್ತೆಯಲ್ಲಿ ಜನ ತಗ್ಗು-ಗುಂಡಿಗಳಲ್ಲಿ ಓಡಾಡುತ್ತಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕೆಸರು ಗದ್ದೆಯಂತಾದ ಈ ರಸ್ತೆಯಲ್ಲಿ ವಾಹನಗಳು ಮತ್ತು ಜನಸಾಮಾನ್ಯರ ಓಡಾಟ ಸಾಧ್ಯವಿಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಜೇಗರಕಲ್, ಮೀರಾಪೂರು ಸಂಪರ್ಕಕ್ಕೆ ಜನ ಪರದಾಡಬೇಕಾಗಿದೆ.
ಗ್ರಾಮಾಂತರ ಶಾಸಕ ದದ್ದಲ ಬಸನಗೌಡ ಅವರು ಈ ರಸ್ತೆಯ ದುಸ್ಥಿತಿ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅಗತ್ಯವಾದ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವರೇ?.

Leave a Comment