ಕೆವಿಜಿ ಬ್ಯಾಂಕ್ -ಕೆನರಾ ಎಚ್.ಎಸ್.ಬಿ. ಸಿ ಜೀವ ವಿಮಾ ಕಂಪನಿ ಒಪ್ಪಂದ

ಧಾರವಾಡ,ಡಿ.3-ರಾಷ್ಟ್ರದ ಪ್ರಮುಖ ಗ್ರಾಮೀಣ ಬ್ಯಾಂಕುಗಳ ಸಾಲಿನಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ  ಬ್ಯಾಂಕ್ ಮತ್ತು ಜೀವ ವಿಮಾ ಕ್ಷೇತ್ರದಲ್ಲಿ ಉತ್ತಮ ಹೆಸರುಗಳಿಸಿರುವ ಕೆನರಾ ಎಚ್.ಎಸ್.ಬಿ. ಸಿ ಜೀವ ವಿಮಾ ಕಂಪನಿ ಬ್ಯಾಂಕ್ ಮೂಲಕ ಜೀವ ವಿಮಾ ಯೋಜನೆಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸೋಮವಾರದಂದು ಮಹತ್ತರ ಒಡಂಬಡಿಕೆಗೆ ಸಹಿ ಹಾಕಿವೆ.  ಈ ಸಂಬಂಧದ ಒಡಂಬಡಿಕೆಗೆ ನಡೆದ ಸಮಾರಮಭವೊಂದರಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕ ಐ ಜಿ ಕುಮಾರ ಗೌಡ ಮತ್ತು ಕೆನರಾ ಎಚ್.ಎಸ್.ಬಿ.ಸಿ ಜೀವ ವಿಮಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುಜ ಮಾಥುರ್ ಪರಸ್ಪರ ಸಹಿ ಮಾಡಿದರು.
ಒಡಂಬಡಿಕೆಯನ್ನು ಹಸ್ತಾಂತರಿಸಿಕೊಂಡು  ಮಾತನಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ ಜನಸಾಮಾನ್ಯರಿಗೆ ವಿಮಾ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಮಹತ್ತರ ಪಾತ್ರವಹಿಸುತ್ತಲಿದ್ದು ಈಗಾಗಲೇ ಭಾರತೀಯ ಜೀವ ವಿಮಾ ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಸಾಮಾಜಿಕ ವಿಮಾ ಯೋಜನೆಗಳ ಅನುಷ್ಠಾನದಲ್ಲೂ ಬ್ಯಾಂಕು ಉತ್ತಮ ಕೆಲಸ ಮಾಡಿದೆ. ಇದೀಗ ಕೆನರಾ ಎಚ್.ಎಸ್.ಬಿ. ಸಿ ಜೀವ ವಿಮಾ ಕಂಪನಿಯ ಜೊತೆಗೂ ಒಪ್ಪಂದ ಮಾಡಿಕೊಂಡಿರುವುದರಿಂದ ಸಾರ್ವಜನಿಕರಿಗೆ ಹಲವು ಆಯ್ಕೆಗಳ ಸ್ವಾತಂತ್ರ್ಯವೂ ಸಿಗಲಿದೆ ಎಂದು ಗೋಪಿ ಕೃಷ್ಣ ಹೇಳಿದರು. ವಿಮೆಯ ಬಗ್ಗೆ ಸಾಕಷ್ಟು ಅರಿವು ನೀಡಲಾಗುತ್ತಿದ್ದರೂ ಜನಸಂಖ್ಯೆಯ ಸರಿ ಸುಮಾರು 50 ರಷ್ಟು ವಿಮಾ ಸೌಲಭ್ಯದಿಂದ ದೂರವಿದ್ದಾರೆ. ಹೀಗಾಗಿ ಸಮಾಜಿಕ ಸುರಕ್ಷೆಗೆ ಹೆಚ್ಚಿನ ಒತ್ತು ನೀಡುವ ದಿಶೆಯಲ್ಲಿ ಬ್ಯಾಂಕು ಇನ್ನೊಂದು ಜೀವ ವಿಮಾ ಕಂಪನಿ ಕೆನರಾ ಎಚ್.ಎಸ್.ಬಿ. ಸಿ ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಪ್ರಸ್ತುತ ಒಂಬತ್ತು ಜಿಲ್ಲೆಗಳ ಕಾರ್ಯವ್ಯಾಪ್ತಿಯಲ್ಲಿ ಸುಮಾರು 80ಲಕ್ಷ ಗ್ರಾಹಕ ಬಳಗವನ್ನು ಹೊಂದಿಗೆ. ವ್ಯವಹಾರಿಕ ಉದ್ದೇಶಗಳನ್ನು ಹೊರತುಪಡಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಗ್ರಾಮೀಣ ಜನರು ಮತ್ತು ಗ್ರಾಮೀಣ ಪ್ರದೇಶದ ಯಾವತ್ತೂ ಅಭಿವೃದ್ಧಿಗೆ ಬದ್ಧವಾಗಿದೆ. ಬ್ಯಾಂಕು ಕಳದೆ 44 ವರ್ಷಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ಹೊಸ ಅರ್ಥ ನೀಡಿದೆ ಎಂದೂ ಗೋಪಿಕೃಷ್ಣ ತಿಳಿಸಿದರು.
ಕೆನರಾ ಎಚ್.ಎಸ್.ಬಿ. ಸಿ ಜೀವ ವಿಮಾ ನಿಗಮದ ಮಂಡಲ ಮುಖ್ಯಸ್ಥ ಸೋಲಿ ಥಾಮಸ್  ಮಾತನಾಡಿ ತಮ್ಮ ಸಂಸ್ಥೆ ಸುಮಾರು 115 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು  10000 ಶಾಖೆಗಳ ಮೂಲಕ ಸೇವೆ ನೀಡುತ್ತಲಿದೆ. ಈ ಜೀವ ವಿಮಾ ಸಂಸ್ಥೆಯಲ್ಲಿ ಕೆನರಾ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಎಚ್.ಎಸ್.ಬಿ. ಸಿ ಪಾಲುದಾರಿಕೆ ಹೊಂದಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಗ್ರಾಮೀಣ ಪ್ರದೇಶದಲ್ಲಿ ಹೊಂದಿರುವ ಬಲಿಷ್ಠ ಜಾಲದಿಂದ ಉತ್ಕೃಷ್ಟ ಲಾಭದಾಯಕ ಪಾಲಿಸಿಗಳು  ಜನರಿಗೆ ದೊರಕುವಂತಾಗಲಿದೆ ಮತ್ತು ಜನಸಾಮಾನ್ಯರ ಸಾಮಾಜಿಕ ಭದ್ರತೆ  ಉತ್ತಮಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾಪ್ರಬಂಧಕರಾದ ಐ ಜಿ ಕುಮಾರ ಗೌಡ, ಪಿ ನಾಗೇಶ್ವರ ರಾವ್, ಕೆನರಾ ಎಚ್.ಎಸ್.ಬಿ. ಸಿ ಜೀವ ವಿಮಾ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಪ್ರದೀಪ ಗೋಪಾಲಯ್ಯ  ಮೊದಲಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದದರು.
ಬ್ಯಾಂಕಿನ ಮುಖ್ಯ ಪ್ರಬಂಧಕ ಶ್ರೀಪಾದರಾವ್ ಸ್ವಾಗತಿಸಿದರು. ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ನಿರೂಪಿಸಿದರು. ವಿಮಾ ಅಧಿಕಾರಿ ರಾಘವೇಂದ್ರ ಕುಲಕರ್ಣಿ ವಂದಿಸಿದಿರು.

Leave a Comment