ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಭಾರತೀಯರು

 ಮುಕುಂದ ಬೆಳಗಲಿ
ವಿಶ್ವದ ದೊಡ್ಡಣ್ಣ ಮನೆಯಲ್ಲೀಗ ಮರಣ ಮೃದಂಗ ಭಾರಿಸುತ್ತಿದೆ. ದೊಡ್ಡಣ್ಣನನ್ನೆ (ಅಮೆರಿಕಾ) ನೆಚ್ಚಿಕೊಂಡಿರುವ ಲಕ್ಷಾಂತರ ಅನಿವಾಸಿ ಭಾರತೀಯರ ಹಾಗೂ ವಿದ್ಯಾರ್ಥಿಗಳ ಮನೆಯಲ್ಲೀಗ ಆತಂಕ ಮನೆಮಾಡಿದೆ.

ಹೌದು, ಮಹಾಮಾರಿ ಕೊರೊನಾ ವೈರಾಣು ಈಗ ಅಮೆರಿಕಾ ದೇಶವನ್ನು ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶ ಹಾಗೂ ಈಶಾನ್ಯ ಭಾಗಗಳು ತತ್ತರಿಸಿವೆ.  ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹೆಣಗಳು ಉರುಳುತ್ತಿದ್ದು, ಜನಜೀವನ ನರಕ ಸದೃಶವಾಗಿದೆ.

ಒಂದೆಡೆ ಕೊರೊನಾ ಸೋಂಕು ನಿತ್ಯ ಹಬ್ಬುತ್ತಿದ್ದರೆ, ಇನ್ನೊಂದೆಡೆ ಇದರಿಂದ ಸಹಸ್ರಾರು ಅನಿವಾಸಿ ಭಾರತೀಯರು ಕೆಲಸ ಕಳೆದುಕೊಂಡು ಅಕ್ಷಶಃ ಬೀದಿ ಪಾಲಾಗುವ ಸ್ಥಿತಿ ಎದುರಾಗುತ್ತಿದೆ.  ನ್ಯೂಯಾರ್ಕ್, ನ್ಯೂಜೆರ್ಸಿ, ಸ್ಯಾನ್ ಪ್ರಾನ್ಸಿಸ್ಕೊ, ಮಿಷಿಗನ್, ಕ್ಯಾಲಿಫೋರ್ನಿಯಾ ಸೇರಿದಂತೆ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಸಹಸ್ರಾರು ಕನ್ನಡಿಗರು ಈಗ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಆಹಾರದ ಸಮಸ್ಯೆಯನ್ನು ಅನುಭವಿಸುವ ಭೀತಿಗೆ ತಲುಪಿದ್ದಾರೆ.

ಅಮೆರಿಕಾದಲ್ಲಿ ಮಾನವ ಸಂಪನ್ಮೂಲವನ್ನು ಸರಬರಾಜು ಮಾಡುತ್ತಿರುವ ಫೋರ್ಡ್‌ ಹಾಗೂ ಟ್ರಿಸ್ಲರ್ ಕಂಪೆನಿಗಳು ಕಳೆದ ಎರಡು ವಾರದಲ್ಲಿ ತಲಾ 10 ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕಿದ್ದು, ಇನ್ನು ಅನೇಕ ಕಂಪೆನಿಗಳು ತೆರೆಮರೆಯಲ್ಲಿ ಇದೇ ಮಾರ್ಗ ಅನುಸರಿಸುತ್ತಿವೆ.

ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಅಮೆರಿಕಾದಲ್ಲೂ ಬದುಕಲು ಆಗದೆ ಹಾಗೂ ಭಾರತಕ್ಕೂ ವಾಪಸ್ಸಾಗಲು ಸಾಧ್ಯವಿಲ್ಲದೆ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ. ಅದರಲ್ಲೂ ಭಾರತೀಯ ಕಂಪೆನಿಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ಅಮೆರಿಕಾ ಮೂಲದ ಕಂಪೆನಿಗಳಿಗೆ ಸೇವೆ ಸಲ್ಲಿಸುತ್ತಿರುವ ಹೆಚ್ಚು ವೇತನ ಪಡೆಯುವವರೇ ಹೆಚ್ಚಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಅಮೆರಿಕಾದ ಸಹಸ್ರಾರು ಕಂಪೆನಿಗಳು ಈಗಾಗಲೇ ಶೇ. 50 ರಷ್ಟು ಉದ್ಯೋಗ ಕಡಿತ ಘೋಷಿಸಿದ್ದು, ಅಮೆರಿಕಾ ಪ್ರಜೆಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿಕೊಂಡಿದೆ. ಹೀಗಾಗಿ ಶಾಶ್ವತ ನಿವಾಸಿಗಳು ಹಾಗೂ ಗ್ರೀನ್ ಕಾರ್ಡ್‌ದಾರರು ಹೇಗೋ ಬದುಕಲು ಅವಕಾಶವಿದ್ದು, ಕಡಿಮೆ ಅವಧಿ ಆಧಾರದ ಮೇಲೆ ಕೆಲಸಕ್ಕೆ ಹೋಗಿರುವ ಅಸಂಖ್ಯಾತರ ತಲೆ ಮೇಲೆ ಉದ್ಯೋಗ ಕಡಿತದ ತೂಗು ಕತ್ತಿ ನೇತಾಡುತ್ತಿದೆ.

ಒಂದೆರಡು ವರ್ಷ ಗುತ್ತಿಗೆ ಆಧಾರದ ಮೇಲೆ ತೆರಳಿರುವ ಅಸಂಖ್ಯಾತರ ಭಾರತೀಯ ಈಗ ಏಕಾಏಕಿ ಉದ್ಯೋಗ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.  ಇಂಥವರಿಗೆ ಸದ್ಯ ಮನೆ ಬಾಡಿಗೆ ಭರಿಸಲಾಗದೆ ಉಗ್ರಾಣ ಮನೆಗಳ (ಸ್ಟೋರ್ ಹೌಸ್)ನ್ನು ಬಾಡಿಗೆಗೆ ಪಡೆದು ವಾಸಿಸುವ ದುಸ್ಥಿತಿಗೆ ತಲುಪಿದ್ದಾರೆ.

ಕಡಿಮೆ ಅವಧಿ ವಾಸದ ಹಿನ್ನೆಲೆಯಲ್ಲಿ ಆಯ್ಕೆ ಮಾಡಿಕೊಂಡಿರುವ ಮಾಸಿಕ ವಿಮೆ ಕಂತನ್ನು ಕಟ್ಟಲು ಸಾಧ್ಯವಾಗದೆ ತಮ್ಮ ಆರೋಗ್ಯವನ್ನು ಒತ್ತೆಯಿಡುವ ಸ್ಥಿತಿಗೆ ತಲುಪಿದ್ದಾರೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿರುವ ಬಹುತೇಕ ವಿದ್ಯಾರ್ಥಿಗಳು ತಮ್ಮ ದೈನಂದಿನ ಖರ್ಚಿಗಾಗಿ ಗಂಟೆಗಳ ಲೆಕ್ಕದ ಮೇಲೆ ಮಾಡುತ್ತಿರುವ ಕೆಲಸಕ್ಕೂ ಕತ್ತರಿ ಬಿದ್ದಿದೆ.

ಕಳೆದ ವಾರವೇ ಅರೆಕಾಲಿಕ ನಿರ್ಬಂಧಿಸಿ ಮಿಷಿಕನ್ ಪ್ರಾಂತ್ಯದಲ್ಲಿ ಆದೇಶ ಹೊರಡಿಸಿದ್ದು, ಇಂಥ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರೆಸುವುದು ಈಗ ಗಗನಕುಸುಮ ಎನಿಸುತ್ತಿದೆ. ನಿತ್ಯ ಗುರುದ್ವಾರ ಹಾಗೂ ದೊಡ್ಡ ದೇವಸ್ಥಾನಗಳಲ್ಲಿ ಭೋಜನ ಸವಿದು ಬದುಕುವ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಈಗ ಆಹಾರ ಸಿಗದೆ ಅಲೆದಾಡುವ ಸ್ಥಿತಿಗೆ ತಲುಪಿದ್ದಾರೆ.

ಅಮೆರಿಕಾದ ಕೆಲ ಭಾಗಗಳಲ್ಲಿ ಲಾಕ್‌ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಅನಿವಾಸಿ ಭಾರತೀಯರು ಈಗ ನರಕಯಾತನೆ ಅನುಭವಿಸುತ್ತಿದ್ದಾರೆ. ಪ್ರಜೆಗಳಿಗೆ, ಗ್ರೀನ್ ಕಾರ್ಡ್‌ದಾರರಿಗೆ ಹಾಗೂ ತೆರಿಗೆ ಪಾವತಿದಾರರ ಹಿತಕಾಪಾಡಲು ಅಮೆರಿಕಾ ಸರ್ಕಾರ ಮೂರು ಟ್ರಿಲಿಯನ್ ಡಾಲರ್ ಹಣವನ್ನು ಮೀಸಲಿಟ್ಟಿದ್ದರೂ ಬಹುಪಾಲು ಅನಿವಾಸಿ ಭಾರತೀಯರಿಗೆ ಇದರಿಂದ ಹೆಚ್ಚಾಗಿ ಲಾಭ ದೊರಕುವ ಸಾಧ್ಯಗಳಿವೆ.

ಕೊರೊನಾ ಮಹಾಮಾರಿಗೆ ಅಮೆರಿಕಾದ್ಯಂತ ಒಟ್ಟು 9600ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಸುಮಾರು 3 ಲಕ್ಷ 27 ಸಾವಿರ ಜನ ಈ ಸೋಂಕು ಪೀಡಿತರಾಗಿದ್ದಾರೆ. ಹೆಚ್ಚು ಜನಸಂದಣಿ ಹೊಂದಿರುವ ನ್ಯೂಯಾರ್ಕ್‌ ನಗರವೊಂದರಲ್ಲೇ 4159 ಜನ ಸಾವಿಗೀಡಾಗಿದ್ದಾರೆ. ಈ ಸಂಖ್ಯೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.

Leave a Comment