ಕೆರೆ ಒತ್ತುವರಿ ತೆರವು ಸಚಿವರ ಭರವಸೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೩- ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಸದ್ಯದಲ್ಲೇ ಆರಂಭವಾಗಲಿದೆ. ಯಾವುದೇ ಮುಲಾಜು, ದಾಕ್ಷಿಣ್ಯ, ಪ್ರಭಾವಕ್ಕೆ ಒಳಗಾಗದೆ ಈ ಒತ್ತುವರಿ ಕಾರ್ಯವನ್ನು ನಡೆಸುವುದಾಗಿ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.

ಈ ಹಿಂದೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3600 ಕೆರಗಳು ಮಾತ್ರ ಇದ್ದವು. ಈಗ ಮುಖ್ಯಮಂತ್ರಿಗಳ ಅಧ್ಯಕ್ಷತೆ ಹಾಗೂ ಸಣ್ಣ ನೀರಾವರಿ ಸಚಿವರು ಉಪಾಧ್ಯಕ್ಷರಾಗಿರುವ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೆ ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿ ಒಳಪಡಲಿದ್ದು, ಸದ್ಯದಲ್ಲೇ ಕೆರೆಗಳ ಒತ್ತುವರಿ, ಹೂಳೆತ್ತುವ ಕಾರ್ಯ ಎಲ್ಲದಕ್ಕೂ ಚಾಲನೆ ನೀಡಲಾಗುವುದು ಎಂದರು.

ನಗರ ಪ್ರದೇಶಗಳಲ್ಲಿ ಕೆಲ ದೊಡ್ಡ ಮನುಷ್ಯರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ದಯ ದಾಕ್ಷಿಣ್ಯವಿಲ್ಲದೆ ಇಂತಹ ಒತ್ತುವರಿಗಳನ್ನು ತೆರವುಗೊಳಿಸುವುದಾಗಿ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

ಕೆರೆಗಳ ಹೂಳೆತ್ತುವ ಕೆರೆ ಸಂಜೀವಿನ ಕಾರ್ಯಕ್ರಮಕ್ಕೂ ಸದ್ಯದಲ್ಲೇ ಚಾಲನೆ ನೀಡಲಾಗುತ್ತಿದೆ. ಈ ಕೆರೆ ಸಂಜೀವಿನ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಮತ್ತು ನಟ ಯಶ್ ರವರ ಯಶ್ ಫೌಂಡೇಷನ್ ಸಂಸ್ಥೆಯನ್ನು ಒಳಪಡಿಸಿಕೊಂಡು ಕೆರೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವುದಾಗಿ ಅವರು ಹೇಳಿದರು.

ಆರಂಭದಲ್ಲಿ ಮೂರು ದೊಡ್ಡ ಕೆರೆಗಳನ್ನು ಕೆರೆ ಸಂಜೀವಿನಿ ಕಾರ್ಯಕ್ರಮದಡಿ ಹೂಳೆತ್ತಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಗೆ ಈಗಾಗಲೇ ಮೂರು ಕೋಟಿ ರೂ. ಅನುದಾನವನ್ನು ತೆಗೆದಿರಿಸಲಾಗಿದೆ. ಅಗತ್ಯವಿದ್ದರೆ ಮತ್ತಷ್ಟು ಅನುದಾನ ನೀಡುತ್ತೇವೆ. ಹಣದ ಕೊರತೆ ಇಲ್ಲ ಎಂದು ಅವರು ಹೇಳಿದರು.

ಕೆರೆ ಸಂರಕ್ಷಣಾ ಪ್ರಾಧಿಕಾರದ ವ್ಯಾಪ್ತಿಗೆ ಈಗ ರಾಜ್ಯದ 30 ಸಾವಿರ ಕೆರೆಗಳು ಒಳಪಡಲಿದ್ದು, ಸ್ಥಳೀಯ ಸಂಸ್ಥೆಗಳ ಸಂಪನ್ಮೂಲಗಳನ್ನೇ ಬಳಸಿಕೊಂಡು ಈ ಕೆರೆಗಳನ್ನು ಅಭಿವೃದ್ಧಿಪಡಿಸುವುದಾಗಿ ಅವರು ಹೇಳಿದರು.

ಕೆರೆ ತುಂಬುವ ಕಾರ್ಯಕ್ರಮ

ರಾಜ್ಯದಲ್ಲಿ ಜಲಾಶಯಗಳು ಪೂರ್ಣವಾಗಿ ತುಂಬಿರುವುದರಿಂದ ಕಾವೇರಿ, ಕೃಷ್ಣ, ತುಂಗಭದ್ರಾ ಸೇರಿದಂತೆ ಎಲ್ಲ ನದಿಗಳ ವ್ಯಾಪ್ತಿಯ ಕೆರೆಗಳ ತುಂಬುವ ಕಾರ್ಯ ನಡೆಯಲಿದ್ದು, ಬರುವ ಡಿಸೆಂಬರ್ ವೇಳೆಗೆ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯ ಪೂರ್ಣವಾಗಲಿದೆ ಎಂದರು.

ಈಗಿರುವ ವ್ಯವಸ್ಥೆಯಡಿ ನಾಲೆಗಳ ಮುಖಾಂತರವೇ ಕೆರೆ ತುಂಬುವ ಕಾರ್ಯ ಆಗಬೇಕಿದೆ. ಹಾಗಾಗಿ ಕೆರೆ ತುಂಬಿಸಲು ಪ್ರತ್ಯೇಕವಾಗಿ ನಾಲೆ ಅಥವಾ ಪೈಪ್‌ಲೈನ್‌ಗಳನ್ನು ಅಳವಡಿಸುವ ಬಗ್ಗೆಯೂ ಚಿಂತನೆ ಇದ್ದು, ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 200 ಕೋಟಿ ರೂ. ವೆಚ್ಚದಲ್ಲಿ ಕೆರೆಯಿಂದ ಕೆರೆಗೆ ಸಂಪರ್ಕ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರ ಯಶಸ್ಸನ್ನು ನೋಡಿಕೊಂಡು ರಾಜ್ಯದ ಎಲ್ಲಡೆ ಕೆರೆಯಿಂದ ಕೆರೆಗೆ ಸಂಪರ್ಕ ಬೃಹತ್ ಹಾಗೂ ಸಣ್ಣ ನೀರಾವರಿ ಇಲಾಖೆ ಜಂಟಿಯಾಗಿ ಅನುಷ್ಠಾನಗೊಳಿಸಲಿದೆ ಎಂದು ಸಚಿವ ಪುಟ್ಟರಾಜು ಹೇಳಿದರು.

ಕೆಸಿ ವ್ಯಾಲಿ ಸದ್ಯದಲ್ಲೇ ತೀರ್ಮಾನ

ಬೆಂಗಳೂರು ನಗರದ ಕೊಳಚೆ ನೀರನ್ನು ಸಂರಕ್ಷಿಸಿ ಕೋಲಾರದ ಕೆರೆಗಳನ್ನು ತುಂಬಿಸುವ ಕೆಸಿ ವ್ಯಾಲಿ ಯೋಜನೆಯ ಲಾಭ ಪಡೆಯಲು ಕೆಲ ರಾಜಕೀಯ ನಾಯಕರು ಹುನ್ನಾರ ನಡೆಸಿದ್ದಾರೆ. ಎರಡು ಹಂತದಲ್ಲಿ ನೀರು ಶುದ್ಧೀಕರಿಸಿ ಕೆರೆ ತುಂಬಿಸಲಾಗುತ್ತಿದೆ. ಮಲೀನ ನೀರು ಹರಿಯುತ್ತಿರುವವ ವಿಚಾರ ಈಗ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ತೀರ್ಪು ನೋಡಿಕೊಂಡು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಮೂರನೇ ಹಂತದಲ್ಲಿ ನೀರನ್ನು ಶುದ್ಧಕರಿಸಿ ಬಿಟ್ಟರೆ ಮಲೀನ ನೀರನ್ನು ತಡೆಯಬಹುದಾಗಿದೆ. ವಿದೇಶಗಳಲ್ಲಿ ಮೂರು ಹಂತಗಳಲ್ಲಿ ನೀರನ್ನು ಸಂಸ್ಕರಿಸಿ ಕುಡಿಯುವುದಕ್ಕೆ ಬಳಸುತ್ತಾರೆ. ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಮೂರು ಹಂತದ ಶುದ್ಧೀಕರಣಕ್ಕೆ ಒಲವು ತೋರಿದ್ದು, ನ್ಯಾಯಾಲದ ಅದೇಶದ ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಂಡು ಶುದ್ಧವಾದ ನೀರನ್ನು ಕೋಲಾರದ ಕೆರೆಗಳಿಗೆ ಹರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮಲೀನ ಬೇಡ

ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಗಣಪತಿಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡಿ ಮಲೀನಗೊಳಿಸದಂತೆ ಮನವಿ ಮಾಡಿದ ಅವರು, ಆದಷ್ಟು ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಬಳಸುವ ಮೂಲಕ ಕೆರೆಗಳ ಮಲೀನ ತಡೆಯುವಂತೆ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

Leave a Comment