ಕೆರೆಯಲ್ಲಿ ಕಾಲುಜಾರಿ ಬಿದ್ದ ರೈತ ಸಾವು

ಕೆ.ಆರ್.ಪೇಟೆ. ಸೆ.08: ಜಮೀನಿನ ಬಳಿ ಉಳುಮೆ ಮಾಡಿ ನಂತರ ದನಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದ ಯುವ ರೈತನೊಬ್ಬ ಕೆರೆಯಲ್ಲಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ದೊಡ್ಡಗಾಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೊಡ್ಡಗಾಡಿಗನಹಳ್ಳಿ ಗ್ರಾಮದ ರಂಗೇಗೌಡರ ಮಗ ಡಿ.ಆರ್.ಕಾರ್ತಿಕ್(23) ಮೃತ ಯುವ ರೈತನಾಗಿದ್ದಾನೆ.
ಘಟನೆ ವಿವರ: ಕಾರ್ತೀಕ್ ಬೆಳಿಗ್ಗೆ 6ಗಂಟೆಗೆ ದನಗಳೊಂದಿಗೆ ತಮ್ಮ ಜಮೀನನ್ನು ಉಳುಮೆ ಮಾಡಲು ಹೋಗಿದ್ದಾನೆ. ಉಳುಮೆಯ ನಂತರ ದನಗಳಿಗೆ ನೀರು ಕುಡಿಸಿ ಮೈತೊಳೆಯುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಮೃತನ ತಂದೆ ರಂಗೇಗೌಡ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿರುವ ಪ್ರಭಾರ ಸಬ್ ಇನ್ಸ್ ಪೆಕ್ಟರ್ ಈರೇಗೌಡ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಶೋಕ್ ಅವರು ರೈತ ಸಂಜೀವಿನಿ ಯೋಜನೆ ಅಡಿಯಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಮೃತರ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

Leave a Comment