ಕೆರೆಗಳ ಅಭಿವೃದ್ಧಿಗೆ 369 ಕೋ.ರೂ. ಮಂಜೂರು ಬಳ್ಳಾರಿ

ಬ್ಯಾಡಗಿ,ನ.13- ಬಹು ವರ್ಷಗಳ ಕನಸಾಗಿದ್ದ ಆಣೂರ ಹಾಗೂ ಬುಡಪನಹಳ್ಳಿ ಗ್ರಾಮಗಳಲ್ಲಿಯ ಸುತ್ತಮುತ್ತಲಿರುವ ದೊಡ್ಡ ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ 369 ಕೋಟಿ ರೂ.ಗಳು ಮಂಜೂರಿಯಾಗಿದ್ದು ಅವು ಸದ್ಯ ಟೆಂಡರ್ ಹಂತದಲ್ಲಿವೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಶೀಘ್ರದಲ್ಲಿಯೇ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆಂದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಅವರು ಲೋಕೋಪಯೋಗಿ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ\ ಪರಿಶಿಷ್ಟ ಪಂಗಡದ ಅನುದಾನದಲ್ಲಿ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ 20 ಲಕ್ಷ ರೂ. ಬೆಳಕೇರಿ ಗ್ರಾಮದಲ್ಲಿ 15 ಲಕ್ಷ ರೂ. ಬಿಸಲಹಳ್ಳಿ ಗ್ರಾಮದಲ್ಲಿ 15 ಲಕ್ಷ ರೂ. ಆಣೂರ ಗ್ರಾಮದಲ್ಲಿ 15 ರೂ.ಗಳು ಸೇರಿದಂತೆ ಒಟ್ಟು 65 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಂಕ್ರಿಟ್ ರಸ್ತೆ ಹಾಗೂ ಪಕ್ಕಾ ಗಟಾರ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆಣೂರ ಮತ್ತು ಬುಡಪನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳಿಗೆ ಜೀವ ಸೆಲೆಯಾಗಿರುವ ದೊಡ್ಡ ಕೆರೆಗಳ ಸಮಗ್ರ ಅಭಿವೃದ್ಧಿಯಿಂದ ಕೃಷಿ ಭೂಮಿಗಳಿಗೆ ಹಾಗೂ ಜನ-ಜಾನುವಾರುಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಭಾಗಗಳ ಜನರಿಗೆ ಕನಸಾಗಿದ್ದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಬಿಜೆಪಿ ಸರಕಾರದ ಅವಧಿಯಲ್ಲಿ ನನಸಾಗಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪನವರ ಅಭಿವೃದ್ಧಿ ಪರ ಕೆಲಸವೇ ಕಾರಣವೆಂದು ಶ್ಲಾಘಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ರವಿ ಪಟ್ಟಣಶೆಟ್ಟಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರಕಾರದಿಂದ ಕೋಟ್ಯಾಂತರ ರೂ.ಗಳು ಮಂಜೂರಿಯಾಗಿದೆ. ಪ್ರತಿಯೊಂದು ಕಾಮಗಾರಿಯ ಬಗ್ಗೆ ಸಾರ್ವಜನಿಕರು ನಿಗಾವಹಿಸಿ ಕಳಪೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮಗಳಲ್ಲಿ  ಕದರಮಂಡಲಗಿ ಗ್ರಾ.ಪಂ.ಅಧ್ಯಕ್ಷೆ ಸೋಮವ್ವ ನಾಯ್ಕರ, ಬಿಸಲಹಳ್ಳಿ ಗ್ರಾ.ಪಂ.ಅಧ್ಯಕ್ಷ ಮಹಬೂಬಸಾಬ ನಧಾಪ. ತಾ.ಪಂ.ಸದಸ್ಯ ಗುಡ್ಡಪ್ಪ ಕೋಳೂರ, ಎಪಿಎಂಸಿ ಸದಸ್ಯ ಹನುಮಂತಪ್ಪ ನಾಯ್ಕರ, ಹನುಮಂತಪ್ಪ ಕುರಡಣ್ಣನವರ, ದ್ಯಾಮನಗೌಡ್ರ, ಹೇಮಂತ ಶೆಟ್ಟರ, ಬಸವರಾಜ ಹಲಗೇರಿ, ಶಿವಪ್ಪ ಹರಮಗಟ್ಟಿ, ದ್ಯಾಮಣ್ಣ ಭರಡಿ, ಜಗದೀಶ, ಗುತ್ತಿಗೆದಾರರಾದ ಚಂದ್ರು ಬತ್ತಿಕೊಪ್ಪ, ದೊಡ್ಡಗೌಡ್ರ, ಸಂತೋಷ ದೊಡ್ಡಮನಿ, ಈರಪ್ಪ ತೆರದಹಳ್ಳಿ, ಜೈಭೀಮ ರಾರಾವಿ, ಇಂಜನೀಯರರಾದ ಕೆ.ರಾಜಪ್ಪ, ಆನಂದ ದೊಡ್ಡಮನಿ, ಎ.ಎಸ್.ಪಾಟೀಲ ಹಾಗೂ ಇನ್ನಿತರರಿದ್ದರು.

Leave a Comment