ಕೆರಾನ್ ವಲಯದಲ್ಲಿ ಕಾರ್ಯಾಚರಣೆ, ಐವರು ಉಗ್ರರ ಹತ್ಯೆ, ಹಲವು ಯೋಧರು ಹುತಾತ್ಮ

ಶ್ರೀನಗರ, ಏ 6 -ಉತ್ತರ ಕಾಶ್ಮೀರದ ಕುಪ್ವಾರಾದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಕೆರಾನ್ ವಲಯದಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸುವ ಕಾರ್ಯಾಚರಣೆಯಲ್ಲಿ ಕಳೆದ 24 ಗಂಟೆಯಲ್ಲಿ ಐವರು ಉಗ್ರರು ಹತರಾಗಿದ್ದು ಅನೇಕ ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಈ ಮಧ್ಯೆ ಗಡಿ ನಿಯಂತ್ರಣ ರೇಖೆ ಬಳಿಯ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಕಡೆಯಿಂದ ಉಗ್ರರ ಗುಂಪು ಒಳನುಸುಳುತ್ತಿರುವುದನ್ನು ಕೆರಾನ್ ವಲಯದ ಗಡಿ ನಿಯಂತ್ರಣ ರೇಖೆ ಕಾಯುವ ಯೋಧರು ಗಮನಿಸಿದ್ದಾರೆ ಎಂದು ರಕ್ಷಣಾ ವಕ್ತಾರರು ಯುಎನ್ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಉಗ್ರರನ್ನು ಶರಣಾಗತರಾಗುವಂತೆ ತಿಳಿಸಿದಾಗ ಅವರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಮೂಲಕ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಭಾರತೀಯ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಐವರು ಉಗ್ರರು ಹತರಾಗಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಪ್ರತೀಕೂಲ ಹವಾಮಾನದ ನಡುವೆಯೂ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ಇಬ್ಬರು ಯೋಧರು ಹುತಾತ್ಮರಾದರು ಎಂದು ಅವರು ಹೇಳಿದ್ದಾರೆ.
ಉಗ್ರರನ್ನು ಸದೆಬಡಿದ ನಂತರ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದೂ ಸಹ ಅವರು ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ ಪ್ರತಿಕೂಲ ಹವಾಮಾನವಿದ್ದು ಸ್ಪಷ್ಟ ನೋಟವಿರದ ಕಾರಣ ಇನ್ನಷ್ಟು ಸಾವು ನೋವು ಸಂಭವಿಸದಿರಲೆಂದು ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಕುಂಕಾಡಿ, ಅವೋರಾ, ಬಾತ್ಪೋರಾ, ಹೈಹಾಮಾ, ಸಫಾವಾಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮತ್ತೆ ಆರಂಭಿಸಲಾಗಿದೆ.

Leave a Comment