ಕೆಬಿಸಿ ಬಹಿಷ್ಕರಿಸಲು ಟ್ವಿಟರ್ ಟ್ರೆಂಡ್​: ಕ್ಷಮೆಯಾಚಿಸಿದ ಸೋನಿ ಟಿವಿ!​

ಮುಂಬೈ: ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ನಡೆಸಿಕೊಡುವ ಪ್ರಸಿದ್ಧ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ಪತಿ’ ವಿರುದ್ಧ ಅಪಸ್ವರ ಕೇಳಿಬಂದಿದೆ. ಈವರೆಗೂ ಶಹಬ್ಬಾಸ್ ಗಿರಿ ಪಡೆಯುತ್ತಿದ್ದ ಶೋ ಮೊದಲ ಬಾರಿಗೆ ಆಕ್ರೋಶಕ್ಕೆ ಕಾರಣವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರಶ್ನೆಯೊಂದರ ಆಯ್ಕೆಗಳಲ್ಲಿ ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಹೆಸರನ್ನು ಬಳಸಿದ್ದು ಇದಕ್ಕೆ ಕಾರಣವಾಗಿದೆ. ಹೀಗಾಗಿ ಟ್ವಿಟರ್ನಲ್ಲಿ ಕೆಬಿಸಿ ಮತ್ತು ಸೋನಿ ಟಿವಿಯನ್ನು ಬಹಿಷ್ಕರಿಸಿ (#Boycott_KBC_SonyTv) ಎಂಬ ಹ್ಯಾಷ್ಟ್ಯಾಗ್ ಶುಕ್ರವಾರ ಟ್ರೆಂಡ್ ಸೃಷ್ಟಿಸಿದೆ. ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಲೇ ಸೋನಿ ಟಿವಿ ತನ್ನ ತಪ್ಪಿನ ಅರಿವಾಗಿ ಜನತೆಯಲ್ಲಿ ಕ್ಷಮೆಯಾಚಿಸಿ ವಿವಾದಕ್ಕೆ ತೆರೆಯೆಳೆಯುವ ಪ್ರಯತ್ನ ಮಾಡಿದೆ.
ವಿವಾದ ಭುಗಿಲೇಳಲು ಕಾರಣವೇನು?
ಅಸಲಿಗೆ ನಡೆದಿದ್ದೇನೆಂದರೆ 17ನೇ ಶತಮಾನದಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಆಳ್ವಿಕೆ ನಡೆಸಿದ ಮೊಘಲ್ ದೊರೆ ಔರಂಗಜೇಬನ ಸಮಕಾಲೀನರ ಬಗ್ಗೆ ಕೆಬಿಸಿ 11ನೇ ಆವೃತ್ತಿಯಲ್ಲಿ ಸ್ಪರ್ಧಿಗೆ ಪ್ರಶ್ನಿಸಲಾಗಿತ್ತು. ನಾಲ್ಕು ಆಯ್ಕೆಗಳಲ್ಲಿ ಛತ್ರಪತಿ ಶಿವಾಜಿ ಎಂದು ಬರೆಯಲು ಏಕವಚನದಲ್ಲಿ ಶಿವಾಜಿ ಎಂದು ಬರೆಯಲಾಗಿತ್ತು. ಉಳಿದ ಮೂರು ಆಯ್ಕೆಗಳಿಗೆ ಮಹಾರಾಣ ಪ್ರತಾಪ್, ರಾಣಾ ಸಂಗ ಮತ್ತು ಮಹಾರಾಜ ರಂಜಿತ್ ಸಿಂಗ್ ಎಂದು ಗೌರವ ಸೂಚಕಗಳನ್ನು ಸೇರಿಸಲಾಗಿತ್ತು. ಇದೇ ಇದೀಗ ವಿವಾದದ ಮೂಲವಾಗಿದೆ.
ಬಿಜೆಪಿ ಶಾಸಕನಿಂದ ಎಚ್ಚರಿಕೆ
ಈ ಬಗ್ಗೆ ಅಸಮಾಧಾನ ಹೊರಹಾಕಿದ್ದ ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ ಕ್ಷಮೆಗಾಗಿ ಒತ್ತಾಯಿಸಿದ್ದರು. ಶಿವಾಜಿನ ಮಹಾರಾಜ್ ಹೆಸರನ್ನು ಏಕವಚನದಲ್ಲಿ ಸಂಬೋಧಿಸುವ ಮೂಲಕ ಅಗೌರವ ಸೂಚಿಸಲಾಗಿದೆ. ಆದಷ್ಟು ಬೇಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಶೋ ಮುಂದುವರಿಯಲು ಯಾವುದೇ ಲೈಫ್ಲೈನ್ ಇರುವುದಿಲ್ಲ ಎಂದು ಎಚ್ಚರಿಸಿದ್ದರು.

ನೆಟ್ಟಿಗರಿಂದಲೂ ಅಸಮಾಧಾನ
ಜಾಲತಾಣದಲ್ಲೂ ಸಾಕಷ್ಟು ಆಕ್ರೋಶ ವ್ಯಕ್ರವಾಗಿದ್ದು, ಸಾರ್ವಜನಿಕವಾಗಿ ಬಹಿರಂಗ ಕ್ಷಮೆಗೆ ಆಗ್ರಹಿಸಿದ್ದಾರೆ. ಇದು ನಿಜಕ್ಕೂ ನೋವಿನ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ. ಛತ್ರಪತಿ ಶಿವಾಜಿ ನಮಗಾಗಿ ತುಂಬಾ ತ್ಯಾಗವನ್ನು ಮಾಡಿದ್ದಾರೆ. ಅವರ ಕೆಲಸಗಳಿಗೆ ಕನಿಷ್ಟ ಪಕ್ಷ ಗೌರವವನ್ನು ನೀಡದಿದ್ದರೆ, ಮುಂದಿನ ತಲೆಮಾರು ಇದರಿಂದ ಏನು ಕಲಿಯಲಿದೆ? ಎಂದು ನೆಟ್ಟಿಗನೊಬ್ಬ ಕಾರ್ಯಕ್ರಮದ ಲೋಪಕ್ಕೆ ಕಿಡಿಕಾರಿದ್ದಾರೆ.

ಕ್ಷಮೆಯಾಚಿಸಿದ ಸೋನಿ ಟಿವಿ
ವಿವಾದ ದೊಡ್ಡದಾಗುತ್ತಲೇ ಕ್ಷಮೆಯಾಚಿಸಿರುವ ಸೋನಿ ಟಿವಿ, ಬುಧವಾರದ ಸಂಚಿಕೆಯಲ್ಲಿ ಸಂಭವಿಸಿದ್ದು ಅಜಾಗರೂಕತೆಯಿಂದಾದ ಲೋಪ. ಇದಕ್ಕೆ ನಾವು ಪಶ್ಚಾತಾಪ ವ್ಯಕ್ತಪಡಿಸುತ್ತೇವೆ. ವೀಕ್ಷಕರ ಭಾವನೆಗಳಿಗೆ ನೋವು ತಂದಿದ್ದಕ್ಕೆ ಕ್ಷಮಿಸಿ ಎಂದು ಟ್ವೀಟ್ ಮೂಲಕ ತಿಳಿಸಿದೆ. (ಏಜೆನ್ಸೀಸ್)

Leave a Comment