ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾಗಿ ಡಿ. ಬಸವರಾಜ್ ನೇಮಕ

ದಾವಣಗೆರೆ.ಸೆ.23; ಜಿಲ್ಲಾ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಡಿ. ಬಸವರಾಜ್‍ರವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಶ್ಲೇಷಕರನ್ನಾಗಿ (ಪ್ಯಾನಲಿಸ್ಟ್) ಕೆಪಿಸಿಸಿ ಮಾಧ್ಯಮ ಮತ್ತು ಸಂವಾಹನ ವಿಭಾಗದ ಅಧ್ಯಕ್ಷರೂ ಹಾಗೂ ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪನವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಡಿ. ಬಸವರಾಜ್ ರವರು ಶಾಲಾ ಕಾಲೇಜಿನ ದಿನಗಳಲ್ಲೇ ವಿದ್ಯಾರ್ಥಿ ಸಂಘಟನೆಯ ನಾಯಕರಾಗಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ನಂತರ ಸರ್ಕಾರಿ ಬ್ಯಾಂಕ್ ಉದ್ಯೋಗಕ್ಕೆ ಸೇರಿದ್ದರು. ಸಮಾಜ ಸೇವೆಯ ತುಡಿತದಿಂದ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕಳೆದ 38 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 1984 ರಲ್ಲಿ ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ, ನಂತರ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡರು. ತದ ನಂತರ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ನಂತರ ರಾಜ್ಯ ಕಾರ್ಯದರ್ಶಿಯಾಗಿ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ, ಕೆಪಿಸಿಸಿ ಚುನಾಯಿತ ಸದಸ್ಯರಾಗಿ ತದನಂತರ ಕೆಪಿಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡು ರಾಜ್ಯದ ಬೆಂಗಳೂರು, ಹಾವೇರಿ, ಧಾರವಾಡ ಜಿಲ್ಲೆ ಸೇರಿದಂತೆ 12 ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಿಕೊಂಡು ಪಕ್ಷದ ಸಂಘಟನೆಯನ್ನು ಮಾಡಿದ್ದಾರೆ. 2014ರ ಹಾವೇರಿ ಲೋಕಸಭಾ ಚುನಾವಣೆಯ ವೀಕ್ಷಕರಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ವೀಕ್ಷಕರಾಗಿ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದು ರಾಜ್ಯದಲ್ಲಿ ಉತ್ತಮ ಸಂಘಟಕರು ಎಂದು ಹೆಸರು ಪಡೆದಿದ್ದಾರೆ. ದಾವಣಗೆರೆ ನಗರಸಭೆಗೆ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿ 2004-05ನೇ ಸಾಲಿಗೆ ದಾವಣಗೆರೆ ನಗರಸಭೆಗೆ ಅಧ್ಯಕ್ಷರಾಗಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳವುದರ ಜೊತೆಗೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ರವರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡು ಉತ್ತಮ ಸಾಧನೆ ಮಾಡಿ ನಿಗಮವು ಸರ್ಕಾರದಿಂದ ಪಡೆದಿದ್ದ 22 ಕೋಟಿ ಸಾಲವನ್ನು ಮರುಪಾವತಿ ಮಾಡಿದರು. ಲಾಭಾಂಶ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಕೋಟಿ ರೂ.ಗಳನ್ನು ನೀಡುವುದರ ಮೂಲಕ ಒಟ್ಟಾರೆ 32 ಕೋಟಿ ರೂ.ಗಳನ್ನು ರೇಷ್ಮೆ ನಿಗಮದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡುವುದರ ಮೂಲಕ ನಿಗಮವು ಶತಮಾನದಲ್ಲೇ ಕಂಡು ಕೇಳರಿಯದ ಸಾಧನೆ ಮಾಡಿ ಸರ್ಕಾರದ ನೂರಾರು ನಿಗಮ ಮಂಡಳಿಗಳ ಪೈಕಿ ನಂ.1 ನಿಗಮವಾಗಿ ಸರ್ಕಾರದ ಮುಖ್ಯಮಂತ್ರಿಗಳ ರತ್ನ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಡಿ. ಬಸವರಾಜ್‍ರವರದ್ದು. ಇದೀಗ ಕೆಪಿಸಿಸಿಯ ಮಾಧ್ಯಮದ ವಿಶ್ಲೇಷಕರಾಗಿ ಮುದ್ರಣ ಮಾಧ್ಯಮ ಮತ್ತು ವಿದ್ಯನ್ಮಾನ ಮಾಧ್ಯಮದ ಮುಂದೆ ಕಾಂಗ್ರೆಸ್ ಪಕ್ಷದ ಸಂಘಟನೆಯ ಬಗ್ಗೆ ಕಾರ್ಯನಿರ್ವಹಿಸಲಿದ್ದಾರೆ.

Leave a Comment