ಕೆಪಿಸಿಸಿ ಪುನರ್ ರಚನೆ ಶಾಸಕರ ಅಸಮಾಧಾನ ಸಿಎಂ ಗರಂ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೭ – ಪ್ರದೇಶ ಕಾಂಗ್ರೆಸ್‌ನ ಪದಾಧಿಕಾರಿಗಳ ನೇಮಕದ ಬಗ್ಗೆ ಅಸಮಾಧಾನಗೊಂಡಿರುವ ಶಾಸಕರುಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದ ಪ್ರಸಂಗ ನಡೆಯಿತು.

ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಶಾಸಕರಿಗೆ ಆಧ್ಯತೆ ನೀಡದ ಬಗ್ಗೆ ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದ್ದ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಿಟ್ಟು ನೋಡಿ ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಮೌನಕ್ಕೆ ಶರಣಾದರು.

ಶಾಸಕರು ಪದಾಧಿಕಾರಿಗಳ ನೇಮಕಾತಿಯ ತಾರತಮ್ಯದ ಬಗ್ಗೆ ಪ್ರಸ್ತಾಪಿಸುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿಷಯ ಪ್ರಸ್ತಾಪಿಸಿ ಪದಾಧಿಕಾರಿಗಳ ನೇಮಕದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕರಿಗೆ ‘ಹಿತ’ವಚನ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಪಟ್ಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರ ಬಗ್ಗೆ ಸಿಟ್ಟಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣೆ ಹತ್ತಿರ ಬರುತ್ತಿದೆ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನ ಕೊಡಿ, ರಾಜ್ಯ ಸರ್ಕಾರದ ಸಾಧನೆಗಳನ್ನು ಜನತೆಗೆ ಮುಟ್ಟಿಸುವ ಪ್ರಯತ್ನ ಮಾಡಿ, ಅದು ಬಿಟ್ಟು ಪದಾಧಿಕಾರಿಗಳ ಪಟ್ಟಿಯ ಬಗ್ಗೆ ಮಾತನಾಡುವುದು ಬೇಡ ಎಂದು ತಾಕೀತು ಮಾಡಿದರು.

ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಆಲೋಚಿಸಿ, ಪದಾಧಿಕಾರಿಗಳ ನೇಮಕದ ವಿಚಾರವನ್ನು ಪಕ್ಷದ ಅಧ್ಯಕ್ಷರಿಗೆ ಬಿಟ್ಟುಬಿಡಿ, ಆ ಬಗ್ಗೆಯೇ ಯೋಚನೆ ಮಾಡಬೇಡಿ, ಚುನಾವಣೆಗೆ ಸಿದ್ಧರಾಗಿ ಎಂದು ಶಾಸಕರಿಗೆ ಕಿವಿಮಾತು ಹೇಳಿದರು.

ಬೇಕಾಬಿಟ್ಟಿಯಾಗಿ ಮಾತನಾಡಿ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಬೇಡಿ ಎಂದು ಅವರು ಪರೋಕ್ಷವಾಗಿ ಪದಾಧಿಕಾರಿಗಳ ನೇಮಕದ ಬಗ್ಗೆ ಅಸಮಾಧಾನ ಹೊರಹಾಕಿದ್ದ ಶಾಸಕ ಸೋಮಶೇಖರ್ ಅವರಿಗೆ ಕಿವಿಮಾತು ಹೇಳಿದರು.  ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಪಾಲ್ಗೊಂಡಿದ್ದರು.  ಶಾಸಕಾಂಗ ಪಕ್ಷದ ಸಭೆ 1 ಗಂಟೆ ತ‌ಡವಾಗಿ ಆರಂಭವಾಯಿತು.

ಚುನಾವಣೆಯಲ್ಲಿ ಶಾಸಕರಿಗೆ ಹೆಚ್ಚಿನ ಕೆಲಸ ಇರುತ್ತದೆ. ಹಾಗಾಗಿ ಪಕ್ಷದ ಕೆಲಸದ ಹೊರೆ ಹಾಕುವುದು ಬೇಡ ಎಂಬ ಕಾರಣಕ್ಕೆ ನೂತನ ಪದಾಧಿಕಾರಿಗಳ ನೇಮಕದಲ್ಲಿ ಶಾಸಕರಿಗೆ ಅವಕಾಶ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಶಾಸಕರಿಗೆ ಪಕ್ಷದ ಕೆಲಸದ ಹೊರೆ ಹೊರಿಸಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿತ್ತು. ಹಾಗಾಗಿ ಹೈಕಮಾಂಡ್‌ನ ಸೂಚನೆಯನ್ನು ಪಾಲಿಸಿದ್ದೇವೆ ಎಂದರು.

ಶಾಸಕರು ಪದಾಧಿಕಾರಿಗಳಾಗಲು ಸಮರ್ಥರಲ್ಲ ಎಂದು ಅವರನ್ನು ನೇಮಕ ಮಾಡಿಲ್ಲ ಎಂಬುದು ಸರಿಯಲ್ಲ. ಚುನಾವಣಾ ಸಂದರ್ಭದಲ್ಲಿ ಶಾಸಕರು ಕ್ಷೇತ್ರಗಳಲ್ಲಿ ಹೆಚ್ಚು ಕೆಲಸ ಮಾಡಲಿ ಎಂದು ಅವರಿಗೆ ಪಕ್ಷದ ಜವಾಬ್ದಾರಿ ನೀಡಿಲ್ಲ ಅಷ್ಟೆ ಎಂದು ಅವರು ಹೇಳಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ನಮ್ಮ ಸಂಖ್ಯಾಬಲ ಕಡಿಮೆ ಇರಬಹುದು. ಆದರೆ, ಇದು ಸೈದ್ಧಾಂತಿಕ ಹೋರಾಟ, ಎಲ್ಲರೂ ತಮ್ಮ ಆತ್ಮಸಾಕ್ಷಿಯಾಗಿ ಮತ ಹಾಕುವಂತೆ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಮೀರಾ ಕುಮಾರ್ ಅವರಿಗೆ ಮತ ಹಾಕುವಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದರು.

Leave a Comment