ಕೆಟ್ಟ ಆಡಳಿತಕ್ಕೆ ಕೈಗನ್ನಡಿ ರಸ್ತೆ ಗುಂಡಿಗಳು – ಬಿಎಸ್‌ವೈ

ಬೆಂಗಳೂರು, ಅ. ೧೨- ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತಕ್ಕೆ ಕೈಗನ್ನಡಿ ಹಿಡಿದಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು.

ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ಇತಿಹಾಸದಲ್ಲೇ ರಸ್ತೆಗಳು ಎಂದೂ ಈ ರೀತಿ ಕೆಟ್ಟು ಹಾಳಾಗಿರಲಿಲ್ಲ ಎಂದು ಟೀಕಿಸಿ, ರಸ್ತೆಗಳು ಹಾಳಾಗಲು ಕಾಂಗ್ರೆಸ್ ಸರ್ಕಾರದ ಕಳಪೆ ಆಡಳಿತವೇ ಕಾರಣ ಎಂದು ಹರಿಹಾಯ್ದರು.

ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಹಣವನ್ನು ಲೂಟಿ ಮಾಡಿದೆ. ನಾಲ್ಕು ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಸರ್ಕಾರ ಹೇಳಿದೆ. ಹಣ ಎಲ್ಲಿ ಹೋಯಿತು, ಯಾರ ಜೇಬು ಸೇರಿದೆ ಎಂದು ಅವರು ಪ್ರಶ್ನಿಸಿದರು.

ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಸುಮಾರು 16 ಸಾವಿರ ಗುಂಡಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಸ್ತೆ ಹಾಳಾಗಲು ಕಾರಣ ಯಾರು, ಮಾತೆತ್ತಿದರೆ ಸಾವಿರಾರು ಕೋಟಿ ರೂ. ಮಾತನಾಡುವ ಸಿದ್ಧರಾಮಯ್ಯ ಯಾವ ರೀತಿ ಅಭಿವೃದ್ಧಿ ನಡೆಸಿದ್ದಾರೆ ಎಂಬುದನ್ನು ಹಾಳಾಗಿರುವ ರಸ್ತೆಗಳೇ ತೋರಿಸುತ್ತಿವೆ ಎಂದರು.

ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ನೀವೇ ನೋಡಿ ರಸ್ತೆಗಳು ಎಷ್ಟು ಹಾಳಾಗಿವೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ ಯಡಿಯೂರಪ್ಪನವರು, ಸತ್ಯ ಹೇಳಿದರೆ ಸಿದ್ಧರಾಮಯ್ಯನವರಿಗೆ ಸಿಟ್ಟು ಬರುತ್ತದೆ ಎಂದು ಹರಿಹಾಯ್ದರು.

ಹಾಳಾಗಿರುವ ರಸ್ತೆಗಳಿಂದ 7-8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರ ಸಾವಿಗೆ ಸರ್ಕಾರವೇ ಹೊಣೆ ಎಂದು ದೂರಿದರು.

ಅಧಿವೇಶನದಲ್ಲೂ ಪ್ರಸ್ತಾಪ

ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಬೆಂಗಳೂರಿನ ಹಾಳಾಗಿರುವ ರಸ್ತೆಗಳು ಸಿದ್ಧರಾಮಯ್ಯನವರ ಆಡಳಿತ ವೈಫಲ್ಯವನ್ನು ಬಿಂಬಿಸಿವೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಬೆಂಗಳೂರಿನ ನರಕ ಸದೃಶ್ಯ ರಸ್ತೆಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ ನಡೆಸುತ್ತದೆ ಎಂದರು.

ಈ ಸಾವು ನ್ಯಾಯವೇ

ನಗರದ ನರಕ ಸದೃಶ್ಯ ರಸ್ತೆಗಳಿಂದ ಹಲವಾರು ನಾಗರೀಕರು ಸತ್ತಿದ್ದಾರೆ. ಈ ಸಾವಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ಈ ಸಾವು ನ್ಯಾಯವೇ ಎಂದು ಪ್ರಶ್ನಿಸಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ನಿದ್ರೆಯಲ್ಲಿರುವ ಸಿದ್ಧರಾಮಯ್ಯ ಅವರು ಈಗಲಾದರೂ ಎಚ್ಚೆತ್ತು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಿ ಎಂದರು.

ಕಾಂಗ್ರೆಸ್ ಸರ್ಕಾರ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಮುಂದಿನ ಚುನಾವಣೆಯಲ್ಲಿ ನಗರದ ನಾಗರೀಕರು ಮತಪೆಟ್ಟಿಗೆಯ ಎಲೆಕ್ಟ್ರಾನಿಕ್ ಗುಂಡಿ ಒತ್ತುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹಳ್ಳ ತೋಡುತ್ತಾರೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಇದಕ್ಕೂ ಮೊದಲು ಜೆಸಿ ನಗರದ ಪೊಲೀಸ್ ಠಾಣೆ ಬಳಿಯಿಂದ ನಗರ ಪ್ರದಕ್ಷಿಣೆ ಆರಂಭಿಸಿದ ಯಡಿಯೂರಪ್ಪನವರು ನಂದಿದುರ್ಗ ರಸ್ತೆ, ಜಯಮಾಲ್ ರಸ್ತೆ, ಶಿವಾಜಿನಗರ,ಅಲಸೂರು, ಶಾಂತಿನಗರ ಹೀಗೆ ಮಧ್ಯಾಹ್ನದವರೆಗೂ ನಗರದ ವಿವಿಧೆಡೆ ಸಂಚರಿಸಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ವೀಕ್ಷಣೆ ನಡೆಸಿ, ನಗರದ ರಸ್ತೆಗಳ ದುಸ್ತಿತಿಯನ್ನು ಖುದ್ಧು ವೀಕ್ಷಿಸಿದರು.

ಈ ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಯಡಿಯೂರಪ್ಪನವರ ಜತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು, ಬಿಬಿಎಂಪಿಯ ನಗರ ಪಾಲಿಕೆ ಸದಸ್ಯರು ಸೇರಿದಂತೆ ಹಲವು ಮುಖಂಡರು ಇದ್ದರು.

ಸರ್ಕಾರದ ವಿರುದ್ದ ಘೋಷಣೆ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ಧರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ, ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.

ಶಿವಾಜಿನಗರದ ಬಸ್ ನಿಲ್ದಾಣದ ಬಳಿಯ ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಕಡೆ ಬಿಜೆಪಿ ನಾಯಕರು ಬಣ್ಣ ಬಳಿಯುವ ಮೂಲಕ ರಸ್ತೆಗಳ ದುಸ್ಥಿತಿಯನ್ನು ಬಿಚ್ಚಿಟ್ಟರು.

ಇದೇ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಬಣ್ಣದಲ್ಲಿ ನಿದ್ರಾಮಯ್ಯ ಎಂದು ಬರೆಯಲು ಹೋಗಿ ನಂತರ ಮನಸ್ಸು ಬದಲಾಯಿಸಿ ನಿದ್ರೆ ಎಂದು ಬರೆದು ಮುಂದೆ ಸಾಗಿದ್ದು ಗಮನ ಸೆಳೆಯಿತು.

Leave a Comment