ಕೆಎಸ್‌ಆರ್‌ಟಿಸಿ ಬಸ್ಸಿನೊಳಗೆ ಚಾಲಕನ ಶವ ಪತ್ತೆ

ಮಂಗಳೂರು, ಮಾ.೧೧- ಕಡಬದಲ್ಲಿ ನಿಲ್ಲಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೃತದೇಹ ಬಸ್ಸಿನೊಳಗೆ ಮುಗ್ಗರಿಸಿ ಕುಳಿತ ಸ್ಥಿತಿಯಲ್ಲಿ ಕಂಡುಬಂದಿದ್ದು ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಬೀದರ್ ಜಿಲ್ಲೆಯ ನಿವಾಸಿ, ಕೆಎಸ್‌ಆರ್‌ಟಿಸಿ ಚಾಲಕ ರೇವಣ್ಣಪ್ಪ ಮೃತಪಟ್ಟ ದುರ್ದೈವಿ. ಪುತ್ತೂರಿನಿಂದ ನಿನ್ನೆ ಸಂಜೆ ಕಡಬಕ್ಕೆ ಆಗಮಿಸಿದ ಬಸ್ಸನ್ನು ಕಡಬದ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಮೀಪ ಹೆದ್ದಾರಿಯ ಪಕ್ಕದಲ್ಲಿ ರಾತ್ರಿ ನಿಲ್ಲಿಸಲಾಗಿತ್ತು.

ಬಸ್ ಮುಂಜಾನೆ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳಬೇಕಿತ್ತು. ಆದರೆ ಬೆಳಗ್ಗೆ ನಿರ್ವಾಹಕ ಎದ್ದು ಚಾಲಕನನ್ನು ಕರೆಯಲೆಂದು ನೋಡಿದಾಗ ಚಾಲಕ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕಡಬ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Comment