ಕೆಎಸ್‌ಆರ್‌ಟಿಸಿ ಆದಾಯ ಹೆಚ್ಚಳಕ್ಕೆ ಕ್ರಮ: ಡಿಸಿಟಿ

ಬೆಂಗಳೂರು, ಸೆ. ೨- ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ಆವರಣದಲ್ಲಿ ವಾಣಿಜ್ಯ ಕಚೇರಿ ನಿರ್ಮಿಸಿ ಇಲಾಖೆ ಆದಾಯ ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ನಗರದಲ್ಲಿಂದು ಕೆಆರ್ ರಸ್ತೆಯ ಕುವೆಂಪು ಕಲಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ
ಉದ್ಫಾಟಿಸಿ ಅವರು ಮಾತನಾಡಿದರು.

ಕೆಎಸ್‌ಆರ್ ಟಿಸಿ ನಷ್ಟದಲ್ಲಿದೆ. ಆದರೆ, ಆದಾಯ ವೃದ್ಧಿಗೆ ಹಲವು ಹೊಸ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ರಾಜ್ಯದಲ್ಲೆಡೆ, ಬಸ್ ನಿಲ್ದಾಣ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ಟೆಂಡರ್ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಅದೇ ರೀತಿ, ಬಸ್ ಘಟಕಗಳಲ್ಲಿ ೫೦೦ ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವ ಚಿಂತನೆ ನಡೆಸಲಾಗುತ್ತಿದೆ.ಈ ಕುರಿತು, ಹಲವಾರು ಒಳ್ಳೆಯ ಅಭಿಪ್ರಾಯ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದರು.

ರಾಜ್ಯದಲ್ಲಿ ಅತೀ ಹೆಚ್ಚು ಉದ್ಯೋಗ ಅವಕಾಶ ಕಲ್ಪಿಸುವ ಏಕೈಕ ಸಂಸ್ಥೆ ಸಾರಿಗೆ.ಅದು ಅಲ್ಲದೆ, ಹೆಚ್ಚಾಗಿ ಕನ್ನಡಿಗರೇ ಉದ್ಯೋಗದಲ್ಲಿದ್ದು, ಅದರಲ್ಲಿ ಸಾಕಷ್ಟು ಗ್ರಾಮೀಣ ಪ್ರದೇಶದಿಂದ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಅವರೇ ನಮ್ಮ ಆಧಾರ ಸ್ಥಂಭ ಎಂದು ತಮ್ಮಣ್ಣ ನುಡಿದರು.

ಕೆಳ ವರ್ಗದ ನೌಕರರಿಗೆ ತೊಂದರೆ ಕೊಡಬೇಡಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ನೌಕರರಿಗೆ ಸಾಕಷ್ಟು ಸಮಸ್ಯೆ ಇರುತ್ತೆ. ಅವರು ಮಾನಸಿಕವಾಗಿ ಕುಗ್ಗಿರುತ್ತಾರೆ. ಹೀಗಾಗಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತೆ ಅಂತ ತಿಳಿಸಿದರು.

ಭ್ರಷ್ಟಾಚಾರ: ನಿಮ್ಮಲ್ಲಿ ಭ್ರಷ್ಟಾಚಾರ ಬೇಡ, ನಿಗಮವೂ ಲಾಭದಾಯವಾಗಿ ನಡೆಯುತ್ತಿದೆ.
ಒಂದು ವೇಳೆ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದರೆ, ಮುಂದೆ ಬರುವ ಸರ್ಕಾರಗಳು, ಖಾಸಗೀಕರಣಕ್ಕೆ ಒತ್ತು ನೀಡಲಿವೆ. ಇದರಿಂದ ಲಕ್ಷಾಂತರ ನೌಕರರ ಭವಿಷ್ಯ ಬೀದಿ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಹಕಾರ ಸಂಘದ ನಿರ್ದೇಶಕರು ಪ್ರಾಮಾಣಿಕ ವಾಗಿ ಕೆಲಸ ಮಾಡಿದಾಗ ಮಾತ್ರ ಸಹಕಾರಿ ಬ್ಯಾಂಕ್ , ಸಂಘ ಉಳಿಯಲು ಸಾಧ್ಯ.ಅಲ್ಲದೆ, ಎಷ್ಟು ಸಹಕಾರಿ ಸಂಘಗಳು ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಕಾರಣ ಒಳಗಿನ ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿ ಇಲ್ಲದೇ ಇರೋದು.ಜೊತೆಗೆ, ಅಧಿಕಾರಿ ವರ್ಗ ವೈಫಲ್ಯ ಕಾರಣ ಎಂದರು.

ಚೆಕ್: ಕೊಡುಗಿನಲ್ಲಿ ಪ್ರವಾಹ ಉಂಟಾಗಿ, ಆಸ್ತಿ,ಹಾಗೂ ಸಾಕಷ್ಟು ನಷ್ಟ ಅನುಭವಿಸಿದ ಕಾರಣ, ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ಸಂಘದ ಸದಸ್ಯರುಗಳಿಂದ ಸಂಗ್ರಹಿಸಲಾದ ದೇಣಿಗೆ ಮೊತ್ತ ೧೭,೯೭,೫೦೭ ರೂಪಾಯಿಗಳನ್ನು ಚೆಕ್ ಮೂಲಕ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್, ಶಾಸಕಿ ಸೌಮ್ಯ ರೆಡ್ಡಿ, ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಸೇರಿ ಪ್ರಮುಖರಿದ್ದರು.

Leave a Comment