ಕೆಎನ್ಆರ್ ವಿರುದ್ಧ ಪ್ರತಿಭಟನೆ ಮುಂದೂಡಿಕೆ

ತುಮಕೂರು, ಜೂ. ೧೦- ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಪರಮೇಶ್ವರ್ ಅಭಿಮಾನಿ ಬಳಗದಿಂದ ಜೂ. 12ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಿ.ಪಂ.ಸದಸ್ಯ ಕೆಂಚಮಾರಯ್ಯ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿಗಳ ಘನತೆಗೆ ಗೌರವ ಕೊಡದ, ಪ್ರತಿಭಟಿಸಿದರೆ ನಾಲಿಗೆ ಸೀಳುವುದಾಗಿ ಹೇಳಿದ ಸರ್ವಾಧಿಕಾರಿ ಧೋರಣೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಪ್ರತಿಭಟನೆಗೆ ಅವಕಾಶ ಸಿಗಲಿಲ್ಲ. ಕಾನೂನು ಕಾರಣಗಳಿಂದ ಪ್ರತಿಭಟನೆಗೆ ಅವಕಾಶವನ್ನು ಪೋಲೀಸರು ನಿರಾಕರಿಸಿದ್ದರಿಂದ ಹಾಗೂ ಘಟನೆ ಬಗ್ಗೆ ಕೆ.ಎನ್.ರಾಜಣ್ಣ ವಿಷಾದ ವ್ಯಕ್ತಪಡಿಸಿರುವುದರಿಂದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದರು.

ಪ್ರತಿಭಟನೆಗೆ ಹತ್ತು ತಾಲ್ಲೂಕುಗಳ ಮುಖಂಡರು ಉತ್ತಮ ಸ್ಪಂದನೆ ನೀಡಿದ್ದರು. ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿಷಾದ ವ್ಯಕ್ತಪಡಿಸಿದ ನಂತರ ತಾಲ್ಲೂಕು ಮುಖಂಡರುಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗೂ ಮುನ್ನ ಚಿಂತಿಸುವುದು ಒಳ್ಳೆಯದು, ಆತುರದ ತೀರ್ಮಾನ ಬೇಡ ಎಂಬ ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಸ್ವೀಕರಿಸಿದ್ದು, ವಿಷಾದದ ಬಗ್ಗೆ ಜಾತ್ಯತೀತವಾಗಿ, ಪಕ್ಷಾತೀತವಾಗಿ ಬೆಂಬಲ ಸೂಚಿಸಿರುವವರೊಂದಿಗೆ ಚರ್ಚಿಸಿ ಪ್ರತಿಭಟನೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಉಪಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಸರ್ವಾಧಿಕಾರಿ ಧೋರಣೆಯ ವಿರುದ್ಧ ಪಕ್ಷಾತೀತವಾಗಿ ಹೋರಾಟವನ್ನು ರೂಪಿಸಲಾಗುತ್ತಿದ್ದು, ಯಾವುದೇ ಜಾತಿ ಅಥವಾ ಪಕ್ಷದ ವಿರುದ್ಧ ಅಲ್ಲ. ಪ್ರತಿಭಟನೆಯನ್ನು ನಿಲ್ಲಿಸುವಂತೆ ನಮ್ಮ ಪಕ್ಷದ ಯಾವ ಮುಖಂಡರೂ ನಮಗೆ ಸೂಚಿಸಿಲ್ಲ. ಯಾವುದೇ ಒತ್ತಡಕ್ಕೆ ಮಣಿದು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ಪಕ್ಷಾತೀತವಾಗಿ ಸಂಘಟಿತರಾಗಿರುವುದರಿಂದ ವಿಷಾದದ ಬಗ್ಗೆ ಚರ್ಚಿಸುವುದು ಅವಶ್ಯಕವಾಗಿರುವುದರಿಂದ ಮುಂದೂಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಜೂ.12 ರಂದು ಪ್ರತಿಭಟನೆಗೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಬೇರೆ ಬೇರೆ ಬೆಳವಣಿಗೆ ಕಾರಣದಿಂದ ಮುಂದೂಡಿರುವ ಪ್ರತಿಭಟನೆ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸುವುದಾಗಿ ಎಲ್ಲ ತಾಲ್ಲೂಕುಗಳಲ್ಲಿಯೂ ಪ್ರವಾಸ ಮಾಡುತ್ತೇವೆ. ಎಲ್ಲ ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುತ್ತೇವೆ ಎನ್ನುವ ನಂಬಿಕೆ ಇದ್ದು, ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಜಿ.ಪಂ. ಸದಸ್ಯ ನಾರಾಯಣಮೂರ್ತಿ, ಯಾದವ ಸಂಘದ ಅಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಮಾಜಿ ನಗರಸಭಾ ಸದಸ್ಯ ತರುಣೇಶ್, ಮುಖಂಡರಾದ ವಾಲೆಚಂದ್ರು, ಸೋಮಣ್ಣ, ಅತೀಕ್ ಅಹಮದ್, ಪುಟ್ಟರಾಜು, ನಿಂಗರಾಜು, ದಿನೇಶ್, ನರಸೀಯಪ್ಪ, ರೇವಣ್ಣ ಸಿದ್ದಪ್ಪ, ನಗರ ಪಾಲಿಕೆ ಸದಸ್ಯ ಮಹೇಶ್, ಗೋವಿಂದೇಗೌಡ, ದೀಪು ಮತ್ತಿತರರು ಉಪಸ್ಥಿತರಿದ್ದರು.

Leave a Comment