ಕೆಂಪೇಗೌಡರ ದಿನಾಚರಣೆ  ಬಿಬಿಎಂಪಿ ಸಂಭ್ರಮ

ಬೆಂಗಳೂರು, ಸೆ ೪- ನಾಡಪ್ರಭು ಕೆಂಪೇಗೌಡರ ದಿನಾಚರಣೆ ಅಂಗವಾಗಿ ನಗರದ 4 ಗಡಿಗೋಪುರಗಳಿಂದ ಬಿಬಿಎಂಪಿ ಕೇಂದ್ರ ಕಚೇರಿಗೆ ತರಲಾದ ದಿವ್ಯ ಜ್ಯೋತಿಯು ಸಂಭ್ರಮಕ್ಕೆ ಸಾಕ್ಷಿಯಾಯಿತು.
ಕೆಂಪೇಗೌಡರು ನಿರ್ಮಿಸಿದ 4 ಗಡಿಗೋಪುರಗಳಾದ ಲಾಲ್ ಬಾಗ್, ಅಲಸೂರು ಕೆರೆ, ಕೆಂಪಾಬುದ್ದಿ ಕೆರೆ, ಕೆಂಪೇಗೌಡ ಉದ್ಯಾನವನ (ಮೇಖ್ರಿ ವೃತ್ತ) ದಿಂದ ಹೊರಟ ಕೆಂಪೇಗೌಡರ ದಿವ್ಯ ಜ್ಯೋತಿಯ ಬೃಹತ್ ಮೆರವಣಿಗೆ ಮಧ್ಯಾಹ್ನದ ಹೊತ್ತಿಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ತಲುಪಿದಾಗ ಖುದ್ದು ಮೇಯರ್ ಅವರು ಜ್ಯೋತಿಯನ್ನು ಬರ ಮಾಡಿಕೊಂಡರು.
4 ಗಡಿಗೋಪುರ ಗಳಿಂದ ಅಲ್ಲದೇ ಮಾಗಡಿಯ ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿಯಿಂದಲೂ ದಿವ್ಯ ಜ್ಯೋತಿಯು ಬಿಬಿಎಂಪಿ ಕೇಂದ್ರ ಕಚೇರಿ ತಲುಪಿದಾಗ ಉತ್ಸಾಹದಿಂದ ಕೆಂಪೇಗೌಡರಿಗೆ ಜೈಕಾರದ ಘೋಷಣೆಗಳನ್ನು ಕೂಗಿ ಬರಮಾಡಿಕೊಂಡರು.
ಮೆಖ್ರೀ ವೃತ್ತದಲ್ಲಿರುವ ಕೆಂಪೇಗೌಡರ ಉದ್ಯಾನವನದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡಿದಲ್ಲದೇ ಅಲ್ಲಿಂದ ದಿವ್ಯ ಜ್ಯೋತಿಗೆ ಪೂಜೆ ಸಲ್ಲಿಸುವುದರ ಮೂಲಕ 4 ಗಡಿ ಗೋಪುರಗಳಿಂದ ಹೊರಡುವ ಜ್ಯೋತಿಗೆ ಚಾಲನೆ ನೀಡಿದರು.
ಪ್ರತಿ ಗೋಪುರಗಳಿಂದ ಕೆಂಪೇಗೌಡರ ದಿವ್ಯ ಜ್ಯೋತಿಯು ಸಾಂಸ್ಕೃತಿಕ ಮೆರವಣಿಗೆ ಮೂಲಕ ಕೇಂದ್ರ ಕಚೇರಿಗೆ ತರಲಾಯಿತು. ಡೋಳು ಕುಣಿತ, ಕರಡಿ ಕುಣಿತ, ನಂದಿ ಧ್ವಜ, ಸೇರಿದಂತೆ ಹಲವು ಸಾಂಸ್ಕೃತಿಕ ಪ್ರಕಾರಗಳೊಂದಿಗೆ ಮೆರವಣಿಗೆಗೆ ಕಲಾವಿದರು ಇನ್ನಷ್ಟು ರಂಗೇರಿಸಿದರು.
ಕೆಂಪೇಗೌಡರ ದಿನಾಚರಣೆಗಾಗಿ ಹಡ್ಸನ್ ವೃತ್ತ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಚೇರಿ ಆವರಣದಲ್ಲಿ ಮಂಗಳ ವಾದ್ಯ, ಡೋಳು ಕುಣಿತ, ಕಲಾವಿದರು ಮಧ್ಯಾಹ್ನದವರೆಗೂ ಹೆಜ್ಜೆಗೆ ಹೆಜ್ಜೆ ಹಾಕಿದರು. ಇಡೀ ಆವರಣದಲ್ಲಿ ಸಂಭ್ರಮ ಕಳೆಕಟ್ಟಿತ್ತು.
ಇಂದು ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ 8 ವಲಯಗಳಲ್ಲಿನ ಅಧಿಕಾರಿಗಳು ಮತ್ತು ನೌಕರರು ಕೇಂದ್ರ ಕಚೇರಿಗೆ ಹಾಜರಾಗಿ ಕೆಂಪೇಗೌಡರ ಉತ್ಸವದಲ್ಲಿ ಪಾಲ್ಗೊಂಡರು.
ಕಚೇರಿ ಆವರಣದಲ್ಲಿ ಮಧ್ಯಾಹ್ನ ಎಲ್ಲರಿಗೂ ಊಟದ ವ್ಯವಸ್ಥೆ ಕೂಡ ಮಾಡಲಾಗಿತು. ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರು ಅಲ್ಲದೇ ಕೆಂಪೇಗೌಡರ ವಂಶಸ್ಥರು ಹಾಗೂ ಅಭಿಮಾನಿಗಳು ಸಂಭ್ರಮದಿಂದಲೇ ಉತ್ಸವದಲ್ಲಿ ಪಾಲ್ಗೊಂಡು ಅಭಿಮಾನ ಮೆರೆದರು.
ನಗರದಲ್ಲಿ ಬೆಳ್ಳಿ ರಥ ಹಾಗೂ ಕೆಂಪೇಗೌಡರ ಭಾವಚಿತ್ರವಿರುವ ಸ್ತಬ್ಧ ಚಿತ್ರಗಳ ಮೆರವಣೆಗೆಯನ್ನು ಏರ್ಪಡಿಸಲಾಗಿತು. ಇಂದು ಸಂಜೆ ಡಾ.ರಾಜ್‌ಕುಮಾರ್ ಗಾಜಿನ ಮನೆ ಆವರಣದಲ್ಲಿ ನಾಡ ಪ್ರಭು ಕೆಂಪೇಗೌಡರ ಪ್ರಶಸ್ತಿ ಪುರಸ್ಕೃತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಕೆಂಪೇಗೌಡರ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಉಪ ಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಜೆಡಿಎಸ್ ನ ನೇತ್ರಾ ನಾರಾಯಣ, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಹಾಗೂ ಪಾಲಿಕೆ ಸದಸ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್
ಬೆಂಗಳೂರು ನಗರವನ್ನು ಯೋಜನಾಬದ್ಧವಾಗಿ, ಕೆರೆಗಳು, ಗಡಿಗೋಪುರಗಳು, ಉದ್ಯಾನವನಗಳನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರಿಗೆ ಎಲ್ಲರೂ ಚಿರಋಣಿ ಯಾಗಿರಬೇಕು. ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮೇಖ್ರಿ ವೃತ್ತ ದಲ್ಲಿ ಕೆಂಪೇಗೌಡ ಅವರಿಗೆ ಮಾಲಾರ್ಪಣೆ ಮಾಡಿ ದಿವ್ಯ ಜ್ಯೋತಿಯನ್ನು ತರಲಾಗಿದೆ. 4 ಗಡಿ ಗೋಪುರಗಳಿಂದ ದಿವ್ಯ ಜ್ಯೋತಿಯನ್ನು ಸ್ವೀಕಾರ ಮಾಡುವ ಪುಣ್ಯದ ಕೆಲಸ ನನ್ನದಾಯಿತು. ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಅವರ ಪುತ್ಥಳಿಗೆ ಮತ್ತು ಸಮಾಧಿಗೂ ಪೂಜೆ ಸಲ್ಲಿಸಿದ್ದೇನೆ.
– ಗಂಗಾಂಬಿಕೆ ಮಲ್ಲಿಕಾರ್ಜುನ
ಮೇಯರ್

ಬಾಕ್ಸ್
ನಾವು ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದಿದ್ದೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕೆಂಪೇಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದು ಸಂತೋಷ ತಂದಿದೆ. ಈ ಹಿಂದೆ ಚಿತ್ರನಟ ಜಗ್ಗೇಶ್ ಅವರೊಂದಿಗೆ ಬಂದು ಮಾಲಾರ್ಪಣೆ ಮಾಡಿದ್ದೆ. ಕೆಂಪೇಗೌಡರು ದೊಡ್ಡವರು
ಪುನೀತ್ ರಾಜ್‌ಕುಮಾರ್
ಚಿತ್ರ ನಟ

Leave a Comment